ರಾಮನಗರ : ಮೂರು ದಶಕಗಳಿಂದ ಗ್ರಾಮದಿಂದ ಬಹಿಷ್ಕಾರಕ್ಕೊಳಗಾಗಿದ್ದ ಮಹಿಳೆಯನ್ನು ಶಾಂತಿ ಸಭೆ ನಡೆಸಿ ಮರಳಿ ಗ್ರಾಮಕ್ಕೆ ಕರೆತಂದಿರುವ ಘಟನೆ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಅಗರ ಗ್ರಾಮದಲ್ಲಿ ಇಂದು ನಡೆಯಿತು. ಕಳೆದ 35 ವರ್ಷಗಳಿಂದ ಗ್ರಾಮದಿಂದ ಬಹಿಷ್ಕಾರಕ್ಕೊಳಗಾಗಿದ್ದ ಸಾಕಲಮ್ಮ ಎಂಬವರನ್ನು ಮರಳಿ ಗ್ರಾಮಕ್ಕೆ ಕರೆತರಲಾಯಿತು. ಮಹಿಳೆಯನ್ನು ವಾಪಸ್ ಕರೆತರುವ ಸಂಬಂಧ ಗ್ರಾಮದಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ವಿಜಿಯಣ್ಣ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಪನಿರ್ದೇಶಕ ಜಯಪ್ರಕಾಶ್ ಮತ್ತಿತರ ಅಧಿಕಾರಿಗಳು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ಬಹಿಷ್ಕಾರ ಸಂಬಂಧ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಊರಿಗೆ ವಾಪಸಾದ ಸಾಕಮ್ಮ ಅವರನ್ನು ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಬಹಿಷ್ಕಾರ ಹಾಕುವುದು ಅಪರಾಧ-ತಹಶೀಲ್ದಾರ್: "ಗ್ರಾಮದಿಂದ ಬಹಿಷ್ಕಾರ ಹಾಕುವುದು ಅಪರಾಧ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಡಬಾರದು ಎಂಬ ಉದ್ದೇಶದಿಂದ ಹಿಂದೆ ಹಿರಿಯರು ಈ ರೀತಿ ನಿಯಮ ಮಾಡಿದ್ದರು. ಅದನ್ನು ಕೆಲವರು ದುರುಪಯೋಗ ಮಾಡಿಕೊಂಡು ಬಹಿಷ್ಕಾರ ಹಾಕುವುದು ಸರಿಯಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು" ಎಂದು ತಹಸೀಲ್ದಾರ್ ಎಚ್ಚರಿಕೆ ನೀಡಿದರು.
ಸಾಕಲಮ್ಮ ಮಾತನಾಡಿ, "ಕಳೆದ ಮೂವತೈದು ವರ್ಷಗಳ ಹಿಂದೆ ನಮ್ಮ ಗ್ರಾಮದ ಹಿರಿಯರು ಕ್ಷುಲ್ಲಕ ಕಾರಣಕ್ಕಾಗಿ ನಮ್ಮನ್ನು ಗ್ರಾಮದಿಂದ ಬಹಿಷ್ಕಾರ ಮಾಡಿದ್ದರು. ಗ್ರಾಮಕ್ಕೆ ಮತ್ತೆ ಮರಳಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಆಗಿರಲಿಲ್ಲ. ನನ್ನ ನೋವನ್ನು ಮಾಧ್ಯಮದ ಮಿತ್ರರು ಪತ್ರಿಕೆಯಲ್ಲಿ ಪ್ರಕಟಿಸಿದ ಹಿನ್ನೆಲೆಯಲ್ಲಿ ನಾನು ಮತ್ತೊಮ್ಮೆ ನನ್ನ ಗ್ರಾಮಕ್ಕೆ ಬರುವಂತಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ" ಎಂದು ಮಹಿಳೆ ಹೇಳಿದರು.
ಶಾಂತಿ ಸಭೆಯಲ್ಲಿ ಹಾರೋಹಳ್ಳಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಟರಾಜ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರದುರ್ಗದಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗೆ ಬಹಿಷ್ಕಾರ: ಅಂತರ್ಜಾತಿ ವಿವಾಹ ಸಂಬಂಧ ದಂಪತಿಯನ್ನು ಗ್ರಾಮದಿಂದ ಸಮುದಾಯದ ಮುಖಂಡರು ಬಹಿಷ್ಕರಿಸಿದ ಪ್ರಕರಣ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದಿತ್ತು. ಸಾವಿತ್ರಮ್ಮ ಮತ್ತು ಮಣಿಕಂಠ ಎಂಬ ದಂಪತಿಯನ್ನು ಗ್ರಾಮದಿಂದ ಬಹಿಷ್ಕಾರ ಹಾಕಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬಹಿಷ್ಕಾರ ಹಾಕಿದ ಸಮುದಾಯದ ಮುಖಂಡರ ಜೊತೆ ಜಾಗೃತಿ ಸಭೆ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ದಂಪತಿಯನ್ನು ತಮ್ಮ ಮಗುವಿನ ಜೊತೆ ಮತ್ತೆ ಮರಳಿ ಮನೆಗೆ ಕಳುಹಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದರು.
ಇದನ್ನೂ ಓದಿ: ಅಂತರ್ಜಾತಿ ವಿವಾಹವಾದ ದಂಪತಿ ಬಹಿಷ್ಕಾರ ಪ್ರಕರಣ ಸುಖಾಂತ್ಯ: ಮೂರು ವರ್ಷದ ಬಳಿಕ ಮಗುವಿನ ಜೊತೆ ಮತ್ತೆ ಮನೆಗೆ ಬಂದ ಜೋಡಿ