ರಾಮನಗರ: ಇಂದು ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ. ಹೀಗಾಗಿ ಕರ್ನಾಟಕದಲ್ಲಿ ರಣಹದ್ದುಗಳಿರುವ ಏಕೈಕ ತಾಣವಾದ ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ ಪಕ್ಷಿ ಪ್ರೇಮಿಗಳು ಹಾಗೂ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ಪ್ರಕೃತಿ ನಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಕೃತಿ ನಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮನಗರ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಹೆಗ್ಗಡೆ, ರಾಜ್ಯದಲ್ಲೇ ಅತಿ ಹೆಚ್ಚು ರಣಹದ್ದುಗಳು ಕಾಣಸಿಗುವುದು ರಾಮನಗರ ಜಿಲ್ಲೆಯಲ್ಲಿ. ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ಮಾನವನ ಅತಿಯಾಸೆ ಮತ್ತು ಅಜ್ಞಾನಕ್ಕೆ ಬಲಿಯಾಗಿವೆ. ಜಾನುವಾರುಗಳಿಗೆ ನೀಡುವ ಡೈಕ್ಲೋಫೆನಾಕ್‌ನಿಂದ ರಣಹದ್ದುಗಳ ಸಂತತಿ ಕಡಿಮೆಯಾಗಿದೆ. ಹೀಗಾಗಿ ಹದ್ದುಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ರಾಮದೇವರ ಬೆಟ್ಟ ಎಂದರೆ ಶೋಲೆ ಸಿನಿಮಾ ನೆನಪಿಗೆ ಬರುತ್ತದೆ. ಇದಕ್ಕೆ ರಣಹದ್ದು ಧಾಮ ಎನ್ನುವ ಹೆಸರು ಸಹ ಬಂದಿದೆ. ಈ ಎರಡೂ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ ಬೆಟ್ಟದಲ್ಲಿರುವ ಉದ್ದಕೊಕ್ಕಿನ ರಣಹದ್ದು ಉಳಿಯಬೇಕು. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ರಣಹದ್ದುಗಳ ಸಂತತಿ ಹೆಚ್ಚು ಮಾಡಲು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕ್ರಮ ಕೈಗೊಂಡಿದ್ದಾರೆ.
ಅಧಿಕಾರಿಗಳ ಜೊತೆಗೆ ರಾಮದೇವರ ಬೆಟ್ಟಕ್ಕೆ ಬರುವ ಪ್ರವಾಸಿಗರು ಸಹ ಇದರ ಬಗ್ಗೆ ಗಮನಹರಿಸಬೇಕು. ಆಗ ಮಾತ್ರ ಸಂತತಿ ಹೆಚ್ಚು ಮಾಡಿ ರಾಮದೇವರ ಬೆಟ್ಟ ಉಳಿಸಲು ಸಾಧ್ಯವಾಗಲಿದೆ. ರಣಹದ್ದುಗಳ ಸಂತತಿ ಈಗ ಬೆರಳೆಣಿಕೆಗೆ ಇಳಿದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ಡೈನೋಸರಸ್‌ನಂತೆ ಇವುಗಳನ್ನು ಚಿತ್ರದಲ್ಲಿ ನೋಡಬೇಕಾಗುತ್ತದೆ ಎಂದರು.