ರಾಮನಗರ: ಹಣ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅಮಾನತು ಆದೇಶ ಹೊರಡಿಸಿದ್ದಾರೆ. ಹಣ ದುರುಪಯೋಗ ಆರೋಪದ ಮೇಲೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಶಂಕರ್ ನಾಯಕ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಸ್ತುತ ಬಿಡದಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಶಂಕರ್ ನಾಯಕ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಂಕರ್ ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಕೋರ್ಟ್ ಮೊರೆ ಹೋಗಿ ಅಲ್ಲಿಂದ ಎಫ್ಐಆರ್ಗೆ ತಡೆಯಾಜ್ಞೆ ತಂದಿದ್ದರು. ಇಲಾಖೆ ತನಿಖೆ ಬಳಿಕ ಇದೀಗ ಇನ್ಸ್ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ. ಇದಲ್ಲದೆ ಇದೇ ಶಂಕರ್ ನಾಯಕ್ ವಿರುದ್ಧ ಇನ್ನೂ ಎರಡು ಪ್ರಕರಣಗಳು ದಾಖಲಾಗಿದ್ದವು. ಕೆಂಗೇರಿ ವಿಭಾಗದ ಎಸಿಪಿ ಶಂಕರ್ ನಾಯಕ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ವರದಿ ಕೊಟ್ಟಿದ್ದರು.
ವರದಿ ಆಧರಿಸಿ ದಯಾನಂದ್ ಅವರು ಆಲೋಕ್ ಮೋಹನ್ ಹಾಗೂ ಐಜಿಪಿ ರವಿಕಾಂತೇಗೌಡ ಅವರಿಗೆ ಶಂಕರ್ ನಾಯಕ್ ಅವರನ್ನು ಅಮಾನತು ಮಾಡಿ ಎಂದು ವರದಿ ಕೊಟ್ಟಿದ್ದರು. ಇದೇ ವಿಚಾರವಾಗಿ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಶಂಕರ್ ನಾಯಕ್ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿ ಕೇಸ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 201, 409, 110, 465 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಇಲಾಖೆ ತನಿಖೆ ನಡೆಸಿ ಅಮಾನತು ಮಾಡಿದೆ.
ಯಾವಾಗ ಪ್ರಕರಣ ದಾಖಲಾಗಿತ್ತು?: ಕಳೆದ 2022ರಲ್ಲಿ ಕಳ್ಳತನ ಪ್ರಕರಣ ಒಂದರಲ್ಲಿ 72 ಲಕ್ಷ ಹಣ ರಿಕವರಿ ಮಾಡಿ ವಶಪಡಿಸಿಕೊಂಡಿದ್ದ ಇನ್ಸ್ಪೆಕ್ಟರ್ 72 ಲಕ್ಷ ಹಣವನ್ನು ಸರ್ಕಾರಿ ಖಜಾನೆಗೆ ಕಟ್ಟದೇ ಸ್ವಂತಕ್ಕೆ ಬಳಸಿಕೊಂಡಿದ್ದರು. ಸರ್ಕಾರಕ್ಕೆ ಹಣ ಕಟ್ಟುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಹಣ ಕಟ್ಟಿರಲಿಲ್ಲ. ನಂತರ ಕೆಲ ದಿನಗಳ ಹಿಂದೆ ದುಡ್ಡಿನ ಚೀಲವನ್ನು ಠಾಣೆಯಲ್ಲಿಟ್ಟು ಬಂದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ಶಂಕರ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕೋಲಾರ ಲಾಕಪ್ ಡೆತ್ ಪ್ರಕರಣ: ಪಿಎಸ್ಐ ಸೇರಿ ಇಬ್ಬರು ಕಾನ್ಸ್ಟೇಬಲ್ಗಳ ಅಮಾನತು