ರಾಮನಗರ: ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ 2023ರ ಚುನಾವಣೆಗೆ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಎಂ. ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಮೇಲಿನ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಬಾಲಕೃಷ್ಣ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡರಾದ ಮಾಜಿ ಶಾಸಕ ಬಾಲಕೃಷ್ಣ ಸುಮಾರು 20 ವರ್ಷಗಳಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದು, ಈ ಹಿಂದಿನ ಚುನಾವಣೆಯಲ್ಲಿ ಸೋಲುಂಡಿದ್ದರು. ಒಂದು ಬಾರಿ ಬಿಜೆಪಿ ಹಾಗೂ ಮೂರು ಸಲ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಾಲಕೃಷ್ಣಗೆ ಮಾಗಡಿ ಮತದಾರರು ಸೋಲುಣಿಸಿದ್ದರು. ಸೋಲಿನ ಬಳಿಕವೂ ಕೂಡ ಕಾಂಗ್ರೆಸ್ನಲ್ಲೇ ಇದ್ದಾರೆ.
![Magadi Ex mla balakrishna wrote letter to kpcc president dk shivakumar](https://etvbharatimages.akamaized.net/etvbharat/prod-images/r-kn-rmn-01-21052022-hcb-clash-congress-ka10051_21052022091843_2105f_1653104923_472.jpg)
ಪತ್ರಕ್ಕೆ ಕಾರಣ ರೇವಣ್ಣ: ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಮಾಗಡಿ ಕ್ಷೇತ್ರಕ್ಕೆ ಇವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಮಾಡದಿದ್ದರೂ ಕೂಡ ಕ್ಷೇತ್ರದ ಜನತೆಗೆ ಇವರೇ ಅಭ್ಯರ್ಥಿ ಎಂದು ತಿಳಿದಿತ್ತು. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಂಸದ ಡಿ.ಕೆ ಸುರೇಶ್ ಕೂಡ ಬಾಲಕೃಷ್ಣ ಅವರೇ ಮುಂದಿನ ಅಭ್ಯರ್ಥಿ ಎಂದು ಮೌಖಿಕವಾಗಿ ಹೇಳಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ನಿರತರಾಗಿದ್ದರು.
ಈ ಹಿಂದೆ ನಾನು ಬೇರೆ ಪಕ್ಷದಲ್ಲಿದ್ದಾಗ ಹೆಚ್.ಎಂ.ರೇವಣ್ಣ ಹಾಗೂ ನಾನು ಸುಮಾರು 25 ವರ್ಷಗಳಿಂದ ರಾಜಕೀಯ ಎದುರಾಳಿಗಳಾಗಿದ್ದೆವು. ಬಳಿಕ ನಾನು ಕಾಂಗ್ರೆಸ್ ಸೇರಿರುವುದು ಎಲ್ಲರಿಗೂ ತಿಳಿದ ವಿಚಾರ. ಬಹುಶಃ ರೇವಣ್ಣಗೆ ಮತ್ತೆ ಮಾಗಡಿಯಿಂದ ಸ್ಪರ್ಧಿಸುವ ಹಂಬಲ ಮೂಡಿರಬಹುದು. ಈ ನಡುವೆ ಮಾಗಡಿ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಎ. ಮಂಜುನಾಥ್ರನ್ನು ರೇವಣ್ಣ ಬಹಿರಂಗವಾಗಿಯೇ ಮಾಧ್ಯಮದವರೆದುರು ಹೊಗಳಿದ್ದಾರೆ ಎಂದು ಪತ್ರದಲ್ಲಿ ಬಾಲಕೃಷ್ಣ ತಿಳಿಸಿದ್ದಾರೆ.
![Magadi Ex mla balakrishna wrote letter to kpcc president dk shivakumar](https://etvbharatimages.akamaized.net/etvbharat/prod-images/r-kn-rmn-01-21052022-hcb-clash-congress-ka10051_21052022091843_2105f_1653104923_811.jpg)
ಈ ಎಲ್ಲ ಬೆಳವಣಿಗೆಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹಿನ್ನಡೆಯಾಗಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರೇವಣ್ಣರಿಗೆ ಟಿಕೆಟ್ ನೀಡಿ, ಅವರ ಪರ ನಾನೇ ಪ್ರಚಾರ ಮಾಡಿ ಗೆಲ್ಲಿಸುತ್ತೇನೆ. ದ್ವಂದ್ವ ಹೇಳಿಕೆ ನೀಡಿ ಪಕ್ಷಕ್ಕೆ ಹಿನ್ನಡೆಯಾಗುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ತೊರೆಯುತ್ತಾರಾ?: ಡಿಕೆಶಿಗೆ ಪತ್ರ ಬರೆದಿರುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ಬಾಲಕೃಷ್ಣಗೆ ಮೂಡಿರುವ ಮುನಿಸು ಬಹಿರಂಗಗೊಂಡಿದೆ. ಮುಂದಿನ ದಿನಗಳಲ್ಲಿ ಬಾಲಕೃಷ್ಣ ಕಾಂಗ್ರೆಸ್ ತೊರೆಯಲಿದ್ದಾರಾ ಎಂಬ ಮಾತುಗಳೂ ಕೂಡ ಕೇಳಿಬಂದಿವೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಹೊರ ರಾಜ್ಯದವರ ಆಯ್ಕೆ ಬೇಡ: ವಾಟಾಳ್ ನಾಗರಾಜ್