ರಾಮನಗರ: ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ಮನೆಯಲ್ಲಿ ಸೆರೆಯಾಗಿರುವ ಚಿರತೆಯನ್ನು ಕೊನೆಗೂ ಅರಣ್ಯಾಧಿಕಾರಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಿತು.
ಕಳೆದ ರಾತ್ರಿ ಜಾಲಮಂಗಲ ಗ್ರಾಮದ ನಾಗರಾಜು ಹಾಗೂ ರೇವಣ್ಣ ಎಂಬುವರ ಮನೆಯಲ್ಲಿ ಚಿರತೆ ಸೆರೆಯಾಗಿತ್ತು. ರಾತ್ರಿ ಕುರಿ ಹಾಗೂ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ಮನೆಯವರು ನೋಡಿದ್ದಾರೆ. ಕೂಡಲೇ ಮೆನೆಯಿಂದ ಹೊರ ಬಂದ ಎಲ್ಲರೂ ಚಾಣಾಕ್ಷ್ಯತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿಸಿದ್ದರು.
ಕಳೆದ ರಾತ್ರಿಯಿಂದಲೇ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಅರಣ್ಯ ಇಲಾಖೆ ಸಿಬ್ಬಂದಿ, ಬನ್ನೇರುಘಟ್ಟ ತಜ್ಞ ವೈದ್ಯರಿಂದ ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಕಳೆದೊಂದು ತಿಂಗಳಿಂದ ಚಿರತೆ ಕಾಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದು, ಕೊನೆಗೂ ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.