ರಾಮನಗರ: ಸರ್ಕಾರ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ, ನಮ್ಮ ಹೋರಾಟ ಮುಗಿಯುವವರೆಗೂ ಮನೆಯಲ್ಲಿ ಮಲಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಮೊದಲ ದಿನದ ಪಾದಯಾತ್ರೆಯನ್ನು ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಪೂರ್ಣಗೊಳಿಸಿದ ಬಳಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರ ಮೇಲೂ ಕೇಸ್ ಹಾಕಿ ಜೈಲಿಗೆ ಹಾಕಿ. ನಮ್ಮನ್ನ ಜೈಲಿಗೆ ಕಳುಹಿಸಿ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ. ಸರ್ಕಾರ ಎಷ್ಟೇ ಒತ್ತಡ ತಂದರೂ ನಾವು ಅದಕ್ಕೆ ಹೆದರುವುದಿಲ್ಲ. ಸಿಎಂಗೆ ನನ್ನನ್ನ ಜೈಲಿಗೆ ಹಾಕಬೇಕೆಂಬ ಆಸೆ ಕೂಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ನನಗೂ ಮತ್ತು ಸುರೇಶ್ಗೆ ಶಕ್ತಿ ಕೊಟ್ಟಿದ್ದೀರಿ. ಕ್ಷೇತ್ರ ಮತ್ತು ರಾಜ್ಯದ ಪರ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಸರ್ಕಾರ ಕರ್ಫ್ಯೂ ಘೋಷಣೆ ಮಾಡಿದೆ. ಒಂದು ಅಂಗಡಿ ಸಹ ತೆರೆಯುವಂತಿಲ್ಲ. ನಾನು ಹುಟ್ಟಿದಾಗಿನಿಂದಲೂ ಊರಿನಲ್ಲಿ ಇಂತಹ ಸಂಭ್ರಮ ನೋಡಿರಲಿಲ್ಲ. ಈ ಕ್ಷೇತ್ರಕ್ಕೆ ನೀರು ಕೊಟ್ಟಿದ್ದೇವೆ. ನಾವು ಈ ಕ್ಷೇತ್ರಕ್ಕೆ ರಸ್ತೆಯಿಂದ ಹಿಡಿದು ಎಲ್ಲ ಕೆಲಸ ಮಾಡಿದ್ದೇವೆ. ಡಿ.ಕೆ ಶಿವಕುಮಾರ್ ದೊಡ್ಡ ಅಲಹಳ್ಳಿಯವನು, ಕನಕಪುರದವನು ಅಂತಾ ಹೇಳ್ತಾರೆ ಎಂದರು.
ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು:
ಇದು ರೈತರಿಗಾಗಿ ಮಾಡುತ್ತಿರುವ ಪಾದಯಾತ್ರೆಯಾಗಿದೆ. ನನ್ನನ್ನು ತಿಹಾರ್ ಜೈಲಿಗೆ ಹಾಕಿದ ಹಿನ್ನೆಲೆ ಗಡ್ಡ ಬಿಟ್ಟಿದ್ದೇನೆ. ಈ ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು. ಕ್ಷೇತ್ರಕ್ಕೆ ನಾನು ಬಂದು ಚುನಾವಣೆ ಮಾಡಲು ಆಗಲ್ಲ. ನೀವೇ ನಮಗೆ ಶಕ್ತಿ ಕೊಡಬೇಕು. ನನ್ನ ಹೋರಾಟಕ್ಕೆ ಎರಡು ಪಕ್ಷದವರು ಷಡ್ಯಂತ್ರ ಮಾಡುತ್ತಿದ್ದಾರೆ. ಜೆಡಿಎಸ್, ಬಿಜೆಪಿ ನಾಡದ್ರೋಹಿಗಳು ಹೌದು ಅಲ್ವೋ ಅನ್ನೋದನ್ನ ನೀವೇ ತೀರ್ಮಾನ ಮಾಡಿ. ನಿಮ್ಮ ಅಶೀರ್ವಾದ ನನಗೆ ಇರಲಿ. ನಿಮ್ಮ ಮಗನ ಮೇಲೆ ಪ್ರೀತಿ ಇರಲಿ ಎಂದು ಮನವಿ ಮಾಡಿದರು.
ಆಲಹಳ್ಳಿ ಗ್ರಾಮಕ್ಕೆ ತಲುಪಿದ ಪಾದಯಾತ್ರೆ:
ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೊದಲ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡ ಆಲಹಳ್ಳಿ ಗ್ರಾಮಕ್ಕೆ ತಲುಪಿದ ಪಾದಯಾತ್ರೆ.
ಭಾನುವಾರ(ಜ.9) ರಂದು ಮೇಕೆದಾಟುವಿನಿಂದ ಪಾದಯಾತ್ರೆ ಆರಂಭಿಸಿದ್ದ ಡಿಕೆಶಿ ನೇತೃತ್ವದ ತಂಡ 16 ಕಿ.ಮಿ ಸಂಚರಿಸಿ ದೊಡ್ಡ ಆಲಹಳ್ಳಿ ಗ್ರಾಮಕ್ಕೆ ಬಂದು ತಲುಪಿದೆ. ಹುಟ್ಟೂರಿನಲ್ಲಿ ಸ್ವಂತ ಮನೆ ಇದ್ದರೂ ಕೂಡ ಡಿಕೆಶಿ ಮನೆಯಲ್ಲಿ ಮಲಗದೇ ಶಾಲೆಯಲ್ಲೇ ಮಲಗಿದ್ದರು. ಇಂದು (ಸೋಮವಾರ) ಬೆಳಗ್ಗೆ 8-30ಕ್ಕೆ 2ನೇ ದಿನದ ಪಾದಯಾತ್ರೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ದೊಡ್ಡ ಆಲಹಳ್ಳಿ ತಲುಪಿದ ಕಾಂಗ್ರೆಸ್ ಪಾದಯಾತ್ರೆ: ಹುಟ್ಟೂರಲ್ಲಿ ಮೊಳಗಿತು ಡಿಕೆಶಿಯೇ ಮುಂದಿನ ಸಿಎಂ ಎಂಬ ಘೋಷಣೆ