ರಾಮನಗರ : ಚನ್ನಪಟ್ಟಣ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮಾಡಿರುವ ಅಸಭ್ಯ, ಕೀಳು ಮಟ್ಟದ ಟೀಕೆಗಳಿಗೆ ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಮುಖ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸಿಪಿವೈ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಜೀವನ ಒಂದು ತೆರೆದ ಪುಸ್ತಕ ಎಂದು ಈಗಾಗಲೇ ವಿಧಾನಸಭೆಯಲ್ಲೆ ಹೇಳಿಕೊಂಡಿದ್ದಾರೆ. ಅವರು ಮಾಡಿದ ತಪ್ಪನ್ನು ಅವರೇ ಒಪ್ಪಿಕೊಂಡು ಮಾತನಾಡಿದ್ದಾರೆ.
ಹೀಗಿರುವಾಗ ನಮ್ಮ ನಾಯಕರ ವಿರುದ್ಧ ಮಾತನಾಡಲು ಆತ ಯಾರು? ಈ ಹಿಂದೆ ತಾಲೂಕಿನ ಜನರು 20 ವರ್ಷಗಳ ಕಾಲ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದರು. ಆದರೆ, ಕ್ಷೇತ್ರಕ್ಕೆ ಜನ ಮೆಚ್ಚುವಂತ ಅಭಿವೃದ್ಧಿ ಕಾರ್ಯವನ್ನು ಅವರು ಮಾಡಲಿಲ್ಲ.
ಕೇವಲ ನಾಲ್ಕು ವರ್ಷದ ಅವಧಿಯಲ್ಲಿ 20 ವರ್ಷಗಳಿಂದ ಆಗಿರದ ಅಭಿವೃದ್ಧಿ ಕಾರ್ಯಗಳು ಈ ಕ್ಷೇತ್ರದಲ್ಲಿ ಆಗಿದೆ. ಇದನ್ನು ಸಹಿಸದ ಸಿಪಿವೈ ಇಲ್ಲಸಲ್ಲದ ಆರೋಪ ಮಾಡಿಕೊಂಡು ಹೆಚ್ಡಿಕೆ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೆಗಾಸಿಟಿ ವಂಚನೆ ಮಾಡಿದ ಆರೋಪ : ಮೆಗಾಸಿಟಿ ಎಂಬ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನು ಬೀದಿಪಾಲು ಮಾಡಿದ ವ್ಯಕ್ತಿ ಎಂದರೆ ಯೋಗೇಶ್ವರ್. ಜನರ ದುಡ್ಡು ಬಳಸಿಕೊಂಡು ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ್ದಾರೆ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ್ದು, ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ ಎಂದು ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ಈ ಕೂಡಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಡಿರುವ ಆರೋಪಗಳನ್ನ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡರು ಎಚ್ಚರಿಕೆಯನ್ನು ನೀಡಿದರು.