ರಾಮನಗರ : ಬಿಜೆಪಿ ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಅನುದಾನ ಕಡಿತವಾಗಿರುವುದು ನಿಜ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ರಾಮನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುನಿರತ್ನರ ಕ್ಷೇತ್ರಕ್ಕೆ ಅನುದಾನ ಕಡಿತವಾಗಿರುವುದು ನಿಜ. ಐದು ವರ್ಷದ ಹಿಂದಿನ ಸ್ಥಿತಿ ಹೇಗಿತ್ತು ಎಂಬುದನ್ನು ಮುನಿರತ್ನ ಒಮ್ಮೆ ನೆನಪಿಸಿಕೊಳ್ಳಲಿ. ಆಗ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ ಕೊಟ್ಟಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 260 ರೂ. ಕೋಟಿ ಕಡಿತ ಮಾಡಿದ್ದರು. ನಂತರ ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ₹7 ಸಾವಿರ ಕೋಟಿ ಅನುದಾನದ ಪೈಕಿ, ₹5 ಸಾವಿರ ಕೋಟಿ ಕಡಿತ ಮಾಡಿದ್ದರು. ಬೆಂಗಳೂರಿನ 14 ಬಿಜೆಪಿ ಶಾಸಕರು ₹9 ಸಾವಿರ ಕೋಟಿ ಅನುದಾನ ತೆಗೆದುಕೊಂಡಿದ್ದರು. 12 ಕಾಂಗ್ರೆಸ್ ಶಾಸಕರಿಗೆ ಕೇವಲ ₹1,450 ಕೋಟಿ ಕೊಟ್ಟಿದ್ದರು. ಅನುದಾನ ಕಡಿತವಾಗಿದೆ ಎನ್ನುವವರು ಹಿಂದೇನಾಗಿತ್ತು ಎಂಬುದನ್ನೂ ಸಹ ಹೇಳಬೇಕಲ್ಲವೆ? ಬಿಜೆಪಿಯವರು ಮಾಡಿದ್ದನ್ನು ಜನರ ಮುಂದಿಡಬೇಕಲ್ಲವೇ? ಆದರೂ, ಮುನಿರತ್ನ ಅವರಿಗೆ ಅನುದಾನ ಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳುತ್ತೇನೆ ಎಂದರು.
ಲೋಡ್ ಶೆಡ್ಡಿಂಗ್ ವಿಚಾರ: ರಾಜ್ಯದಲ್ಲಿ ಬರಗಾಲವಿದೆ. ಶೇ 95 ರಷ್ಟು ಹಳ್ಳಿಗಳನ್ನು ಬರ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಜಲಾಶಯಗಳಲ್ಲಿ ನೀರು ಕಡಿಮೆ ಇದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಸಿದಿದ್ದು, ಸ್ವಲ್ಪ ಲೋಡ್ ಶೆಡ್ಡಿಂಗ್ ಇದೆ. ವಿದ್ಯುತ್‌ಗಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ. ಜೊತೆಗೆ ನೆರೆಯ ರಾಜ್ಯಗಳ ಮೊರೆ ಹೋಗಲಾಗಿದೆ ಎಂದು ತಿಳಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆಗೆ ಹೊರ ರಾಜ್ಯದವರನ್ನು ನೇಮಿಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಹಿಂದೆ ಬಿಜೆಪಿಯವರು ರಾಜ್ಯದ ದೊಡ್ಡ ವ್ಯಕ್ತಿಯನ್ನೇ ನೇಮಕ ಮಾಡಿದ್ದರು. ಆಗ ಏನೆಲ್ಲಾ ಅವಾಂತರವಾಯಿತು ಎಂದು ಜನರಿಗೆ ಗೊತ್ತಿದೆ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ಅವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ : ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನಡೆಯುತ್ತಿರುವುದು ಸತ್ಯ, ಶೀಘ್ರವೇ ಸಮಸ್ಯೆ ಸರಿಪಡಿಸುತ್ತೇವೆ: ಸಚಿವ ಚಲುವರಾಯಸ್ವಾಮಿ