ರಾಮನಗರ: ಕನಕಪುರ ತಾಲೂಕಿನ ಸಾತನೂರಿನ ಬಳಿ ನಡೆದ ಇದ್ರೀಷ್ ಪಾಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ನಾಲ್ಕು ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಕುರಿತು ರಾಮನಗರ ಜಿಲ್ಲೆಯ ಕನಕಪುರ ಜೆ ಎಂ ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದುತ್ವ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ನಾಲ್ವರು ಸಹಚರರನ್ನು ಭಾನುವಾರ ರಾಜಸ್ಥಾನದಿಂದ ರಾಮನಗರಕ್ಕೆ ಕರೆತರಲಾಯಿತು. ಬಳಿಕ, ಪೊಲೀಸರು ಆರೋಪಿಗಳನ್ನು ಕನಕಪುರ ಜೆ ಎಂ ಎಫ್ ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಂತರ, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ಈ ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಬೇಕಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದರು. ಈ ಹಿನ್ನೆಲೆ ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಏನಿದು ಪ್ರಕರಣ?: ಮಾರ್ಚ್ 31 ರಂದು ಸಾತನೂರು ಬಳಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 16 ಜಾನುವಾರುಗಳನ್ನು ಪುನೀತ್ ಕೆರೆಹಳ್ಳಿ ಮತ್ತು ಅವರ ಟೀಂ ರಕ್ಷಣೆ ಮಾಡಿತ್ತು. ಆದರೆ, ಕ್ಯಾಂಟರ್ ವಾಹನದಲ್ಲಿದ್ದ ಪಾಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಜಾನುವಾರುಗಳನ್ನು ರಕ್ಷಿಸಿದ ಅನತಿ ದೂರದಲ್ಲಿಯೇ ಇದ್ರೀಷ್ ಮೃತದೇಹ ಪತ್ತೆಯಾಗಿತ್ತು. ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡದಿಂದ ದಾಳಿ ನಡೆಸಲಾಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿ ಸಾತನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಹುಬ್ಬಳ್ಳಿಯಲ್ಲಿ ಮಗುವಿನ ಕೊಲೆ ಮಾಡಿದ್ದವನ ಸೆರೆ: ಇದೇ ತಿಂಗಳ 2ನೇ ತಾರೀಖಿನಂದು ಎಂಟು ವರ್ಷದ ಬಾಲಕ ಕೇವಲ 5 ರೂಪಾಯಿ ಕೇಳಿದ್ದಕ್ಕೆ ಮಗುವಿನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಾಲೆಗೆ ರಜೆ ಇದ್ದ ಕಾರಣ ಬಾಲಕ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೊಡ್ಮನಿ ಕಾಲೋನಿಯ ಅಜ್ಜಿ ಮನೆಗೆಂದು ಬಂದಿದ್ದ. ರವಿ ಬಳ್ಳಾರಿ ಬಳಿ ಆ ಬಾಲಕ ಕೇವಲ 5 ರೂಪಾಯಿ ಕೇಳಿದ್ದಕ್ಕೆ ಕೊಲೆ ಮಾಡಿ, ಮಿರ್ಚಿ ಗ್ರೌಂಡ್ ಕಂಟಿಯಲ್ಲಿ ಎಸೆದು ಹೋಗಿದ್ದ. ಬಳಿಕ ಬೆಂಡಿಗೇರಿ ಪೊಲೀಸರು ತನಿಖೆ ನಡೆಸಿ ಆರೋಪಿ ಬಂಧಿಸಿದ್ದರು.
ಇದನ್ನೂ ಓದಿ: ಅಟ್ಟಪಾಡಿ ಮಧು ಕೊಲೆ ಪ್ರಕರಣ: 13 ಅಪರಾಧಿಗಳಿಗೆ 7 ವರ್ಷ ಜೈಲು, ದಂಡ ವಿಧಿಸಿದ ವಿಶೇಷ ನ್ಯಾಯಾಲಯ
ಅಟ್ಟಪಾಡಿ ಮಧು ಕೊಲೆ ಪ್ರಕರಣ : ಇನ್ನು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದ ಅಟ್ಟಪಾಡಿ ಮಧು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳನ್ನ ದೋಷಿಗಳೆಂದು ಏಪ್ರಿಲ್ 4 ರಂದು ಘೋಷಿಸಿದ್ದ ಮಣ್ಣಾರ್ಕ್ಕಾಡ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ, ಏಪ್ರಿಲ್ 5 ರಂದು 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು. ನ್ಯಾಯಾಧೀಶ ಕೆ ಎಂ ರತೀಶ್ ಕುಮಾರ್ ತೀರ್ಪು ನೀಡಿದ್ದರು.