ರಾಮನಗರ: ಸರ್ಕಾರ ಸಂಕಷ್ಟದ ಸ್ಥಿತಿಯಲ್ಲಿ ಗೋಲ್ಮಾಲ್ಗೆ ಮುಂದಾಗಬಾರದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಲಾಕ್ಡೌನ್ನಿಂದಾಗಿ ಸಾಮಾನ್ಯ ವರ್ಗದ ಜನರು ಹಾಗೂ ಬಡವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ದಿನಗೂಲಿ ಕಾರ್ಮಿಕರು ಹಾಗೂ ನಿರ್ಗತಿಕರು ಆಹಾರ ಸಮಸ್ಯೆಯಿಂದ ಬಳಲುತ್ತಿದ್ದು, ಕ್ಷೇತ್ರದ ಜನತೆಗೆ ಜೆಡಿಎಸ್ ವತಿಯಿಂದ ಅಗತ್ಯ ವಸ್ತುಗಳ ಆಹಾರ ಕಿಟ್ ವಿತರಣೆ ಮಾಡಲಾಯಿತು. ಮಂಜುನಾಥನಗರದಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಹೆಚ್ಡಿಕೆ, ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಅದಕ್ಕಾಗಿ ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳ ಜನತೆಗೆ 1.20 ಲಕ್ಷ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿರುವುದಾಗಿ ತಿಳಿಸಿದರು.
ಸರ್ಕಾರದ ಖಜಾನೆಗೆ ಹಣ ಬಾರದಿರುವುದನ್ನ ನಾನು ಒಪ್ಪುತ್ತೇನೆ. ಆದರೆ ಸರ್ಕಾರ ಅನವಶ್ಯಕ ವೆಚ್ಚ ಕಡಿಮೆ ಮಾಡಬೇಕು. ಒಂದು ಕಂಪನಿಗೆ 12 ಕೋಟಿ ಕೊಟೇಷನ್ ಹಾಕಿಸಿ 30 ಕೋಟಿಗೆ ರೈಸ್ ಮಾಡಿದ್ದಾರೆ. ಇದು ಸರಿಯಲ್ಲ. ಸ್ಯಾನಿಟೈಸರ್ ಖರೀದಿಯಲ್ಲೂ ಅಕ್ರಮ ಮಾಡಿದ್ದಾರೆ ಎಂಬುದನ್ನ ಓದಿದ್ದೇನೆ. ಕೆಲವರಿಗೆ ಆಹಾರ ಪದಾರ್ಥಗಳ ಕಿಟ್ ಕೊಟ್ಟು, ಕೆಲವರಿಗೆ ಕೊಡದಂತೆ ಮಾಡುವುದು ಬೇಡ ಎಂದು ಎಲ್ಲರಿಗೂ ವಿತರಣೆ ಮಾಡ್ತಿದ್ದೇವೆ ಎಂದರು.
ನನ್ನ ಮಗನ ಮದುವೆಯನ್ನು ರಾಮನಗರದಲ್ಲೇ ಮಾಡಬೇಕಿತ್ತು. ಆದರೆ ಲಾಕ್ಡೌನ್ ಹಿನ್ನೆಲೆ ಮಾಡಲು ಆಗಿಲ್ಲ. ಹಾಗಾಗಿ 5.5 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಲಕ್ಷದ ನಾಲ್ಕು ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ. ಮಗನ ಮದುವೆಗೆ ಹಣ ದುಂದು ವೆಚ್ಚ ಆಗುತ್ತಿತ್ತು. ಅದನ್ನು ಇಂತಹ ಪರಿಸ್ಥಿತಿಯಲ್ಲಿ ವಿತರಿಸಲು ಚಿಂತನೆ ನಡೆಸಿ, ಅವರೇ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಬಂದಿದ್ದಾರೆ ಎಂದರು. ಇನ್ನು ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ರೇವತಿ ಭಾಗಿಯಾಗಿದ್ದರು.