ರಾಮನಗರ: ಪಿಎಸ್ಐ (PSI) ಕೆಲಸ ಕೊಡಿಸುವುದಾಗಿ ಹೇಳಿ 14ಲಕ್ಷ ರೂ. ವಂಚನೆ ಪ್ರಕರಣ(Fraud case ) ಸಂಬಂಧ ಮೂವರು ಆರೋಪಿಗಳನ್ನು ಚನ್ನಪಟ್ಟಣಪುರ ಪೊಲೀಸರು (channapatna pura police) ಬಂಧಿಸಿದ್ದಾರೆ.
ಚನ್ನಪಟ್ಟಣ ನಗರದ ಗಿರೀಶ್, ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯ ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ಬಂಧಿತ ಆರೋಪಿಗಳು. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಬಳಿಯ ರಾಮೋಹಳ್ಳಿಯ ಗೋವಿಂದರಾಜು ಮತ್ತು ದಿಲೀಪ್ ಎಂಬುವರಿಂದ ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ರೂ. ಪಡೆದು ಈ ಮೂವರು ವಂಚನೆ ಮಾಡಿದ್ದಾರೆಂದು ಚನ್ನಪಟ್ಟಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳು ಪಿಎಸ್ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 36 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಾವು 1ಲಕ್ಷ, 2 ಲಕ್ಷ ಹಾಗೂ 5 ಲಕ್ಷ ಹೀಗೆ ಹಂತ ಹಂತವಾಗಿ 14 ಲಕ್ಷ ರೂ. ನೀಡಿರುವುದಾಗಿ ಗೋವಿಂದರಾಜು ಮತ್ತು ದಿಲೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣ ನೀಡಿ ಒಂದು ವರ್ಷ ಕಳೆದರೂ ನಮಗೆ ಕೆಲಸ ಕೊಡಿಸಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಹಣ ಮರುಪಾವತಿ ಮಾಡಲು ಕೇಳಿದ್ದಕ್ಕೆ ಚೆಕ್ ನೀಡಿ ವಂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನೀವು ಪೊಲೀಸರಿಗೆ ದೂರು ನೀಡಿದರೂ ಏನು ಮಾಡಿಕೊಳ್ಳಲು ಆಗಲ್ಲ ಎಂದು ಧಮಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಆರೋಪಿಗಳನ್ನ ಬಂಧಿಸಿರುವ ಚನ್ನಪಟ್ಟಣ ಟೌನ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: PSI ಹುದ್ದೆ ಹೆಸರಿನಲ್ಲಿ 14 ಲಕ್ಷ ರೂ. ವಂಚನೆ: ಮೂವರ ವಿರುದ್ಧ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ದೂರು!