ರಾಮನಗರ: ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ನಾವು ಭೂಮಿ ಮಾರುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿ ಗ್ರಾಮಗಳಲ್ಲಿ ಬೋರ್ಡ್ ಹಾಕುವ ಮೂಲಕ ವಿನೂತನ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಪ್ರತಿಭಟನೆ ಆರಂಭಿಸಿರುವ ರೈತ ಸಂಘದ ಕಾರ್ಯಕರ್ತರು, ಸರ್ಕಾರದ ರೈತ ವಿರೋಧಿ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಆಗಸ್ಟ್ 8 ಕ್ವಿಟ್ ಇಂಡಿಯಾ ಚಳವಳಿ ನಡೆದ ದಿನ, ಇಂದು ರೈತರು ತಮ್ಮ ಉಳಿವಿಗಾಗಿ ಹೋರಾಟ ಆರಂಭಿಸಬೇಕಿದೆ. ಭೂಮಿ ಮಾರಾಟ ಮಾಡಿ ರೈತರ ವಿನಾಶಕ್ಕೆ ಮುಂದಾಗಿರುವ ಸರ್ಕಾರದ ನಿಲುವು ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದವರಿಗೆ ಭೂಮಿ ನೀಡುವುದಿಲ್ಲ ಎಂದರು.
ಇದೇ ವೇಳೆ ಹಣದ ಆಸೆಗಾಗಿ ಇಂದು ಭೂಮಿ ಕಳೆದುಕೊಂಡ ರೈತ, ನಾಳೆ ತನ್ನದೇ ಭೂಮಿಯಲ್ಲಿ ಜೀತ ಮಾಡಬೇಕಾಗುತ್ತದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ನೀಡಿ, ರೈತರನ್ನು ಒಕ್ಕಲೆಬ್ಬಿಸುವ ನೀತಿಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದರೇ ಚಳವಳಿ ದೊಡ್ಡಮಟ್ಟಕ್ಕೆ ಬೆಳೆಯುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ರೈತರು ಜಾಗೃತರಾಗಬೇಕು, ರೈತ ಸಂಘದ ಕಾರ್ಯಕರ್ತರು ಗ್ರಾಮದ ಮುಂದೆ ನಾಮಫಲಕ ಅನಾವರಣಗೊಳಿಸಿ ಪ್ರತಿ ವಾರ ಒಂದೊಂದು ಗ್ರಾಮಗಳಲ್ಲಿ ಇಂತಹ ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂದು ರೈತ ಮುಖಂಡ ಚಿಕ್ಕಬೈರಯ್ಯ ಕರೆ ನೀಡಿದರು.