ರಾಮನಗರ/ಮಂಡ್ಯ: ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ಸ್ಫೋಟಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಓದಿ: ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿ ಎಂಬ ಮಾಹಿತಿ ಇದೆ : ದಿನೇಶ್ ಗುಂಡೂರಾವ್
ಇದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹವೇ ಕಾರಣ. ಸರ್ಕಾರದಲ್ಲಿ ಜನರ ಜೀವದ ಬಗ್ಗೆ ಕಮಿಟ್ಮೆಂಟ್ ಇಲ್ಲ ಅನಿಸುತ್ತೆ. ಪ್ರಕರಣ ನಡೆದಾಗ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ಕೊಡುತ್ತಾರೆ. ನಂತರ ಮಂತ್ರಿಗಳ ಹೇಳಿಕೆಯನ್ನು ನಾನು ನೋಡಿದ್ದೇನೆ.
ಒಂದು ವಾರದ ಮುಂಚೆಯೇ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದರೂ ಈ ಘಟನೆ ನಡೆದಿದೆ ಅಂದರೆ ಇವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತದೆ. ರಾಜ್ಯದ ಜನಪ್ರತಿನಿಧಿಗಳೇ ಇವತ್ತು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ವಹಿಸಬೇಕು ಎಂದರು.
ಇದಲ್ಲದೆ ಇಡೀ ರಾಜ್ಯದಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಿನ ಹಣ ಸಿಗಲಿದೆ ಎಂದು ಅಧಿಕಾರಿಗಳು ವ್ಯಾಮೋಹಕ್ಕೆ ಒಳಗಾಗಿದ್ದಾರೆ. ರಾಜಕಾರಣಿಗಳ ಒತ್ತಡದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಸಿಗಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಇನ್ನು ರಾಮನಗರದಿಂದ ರೇಷ್ಮೆ ಮಾರ್ಕೆಟ್ ಸ್ಥಳಾಂತರ ಗಲಾಟೆ ವಿಚಾರಕ್ಕೆ ಸಂಬಂದಿಸಿದಂತೆ, ಅದು ಏನು ಆಗಬೇಕು ಆಗಲಿದೆ. ನಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ರಾಮನಗರದ ಅಭಿವೃದ್ಧಿಗೆ ಸದಾ ಶ್ರಮಿಸುವವನು ನಾನು. ನನ್ನ ಅಭಿವೃದ್ಧಿ ರಾಮನಗರ ಕ್ಷೇತ್ರದ ಜನರಿಗೆ ಗೊತ್ತಿದೆ. ಯಾರೋ ಬೀದಿಯಲ್ಲಿ ಹೋಗೋರಿಗೆ ಉತ್ತರ ಕೊಡಲು ಆಗಲ್ಲ. ನನ್ನದು ತೆರೆದ ಪುಸ್ತಕ, ನಾನು ಯಾವ ಕೆಲಸ ಮಾಡಿದ್ದೇನೆಂದು ಜನರಿಗೆ ಗೊತ್ತಿದೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಕಾಂಗ್ರೆಸ್ನ ಕೆಲವರು ಪಿತೂರಿ ಮಾಡುತ್ತಿದ್ದಾರೆ. ನನ್ನನ್ನ ಕಾಪಾಡಿಕೊಳ್ಳುವ ಶಕ್ತಿ ಜನ ನನಗೆ ಕೊಟ್ಟಿದ್ದಾರೆ ಎಂದರು.
ಲೂಟಿ ಹೊಡೆಯುತ್ತಿರುವ ರಾಜ್ಯ ಸರ್ಕಾರ:
ಈ ಸರ್ಕಾರ ಹಣ ಲೂಟಿ ಮಾಡುವುದನ್ನು ಬಿಟ್ಟು ಬೇರೆನೂ ಮಾಡುತ್ತಿಲ್ಲ. ಪ್ರಧಾನಿಗಳು ವೆಸ್ಟ್ ಬೆಂಗಾಲ್ನಲ್ಲಿ ಭಾಷಣ ಮಾಡುತ್ತಾರೆ. ಭ್ರಷ್ಟಾಚಾರವನ್ನು ನಾವು ತಡೆಯುತ್ತೇವೆಂದು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ ಎಂದರು.
ಇನ್ನು ಮೈತ್ರಿ ಸರ್ಕಾರದಲ್ಲಿ ಕಾವೇರಿ ಬೇಸಿನ್ ಪ್ರದೇಶಕ್ಕೆ 6 ಸಾವಿರ ಕೋಟಿ ರೂ. ಯೋಜನೆಗೆ ಮಂಜೂರಾತಿ ಕೊಟ್ಟೆ. ಆದರೆ ಬಿಜೆಪಿ ಸರ್ಕಾರ ಬಂದು 6 ಸಾವಿರ ಕೋಟಿ ರೂ. ಹಿಂಪಡೆದಿದ್ದಾರೆ. ಇವತ್ತು ತಮಿಳುನಾಡಿನವರು ಕೇಂದ್ರದಿಂದ 6 ಸಾವಿರ ಕೋಟಿ ಹಣ ಪಡೆಯಲು ಮುಂದಾಗಿದ್ದಾರೆ. ಅಲ್ಲಿನ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದರಿಂದಲೇ ಗೊತ್ತಾಗಲಿದೆ ರಾಜ್ಯದ ಬಿಜೆಪಿ ಸರ್ಕಾರದ ನಡೆ ಏನು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶಿವರಾಮೇಗೌಡರಿಗೆ ಯಾವ ರೀತಿ ಮೀಸಲಾತಿ ಬೇಕಂತೆ?
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಒಕ್ಕಲಿಗ ಮೀಸಲಾತಿ ಹೋರಟದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಪ್ರಶ್ನೆ ಮಾಡಿದರು. ಮಂಡ್ಯದ ಕಾಳೇನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಯಾವ ರೀತಿ ಮೀಸಲಾತಿ ಬೇಕು ಅನ್ನೊದು ಗೊತ್ತಿಲ್ಲ. ಇದರ ಬಗ್ಗೆ ಈಗ ಚರ್ಚೆ ಬೇಡ. ಮೀಸಲಾತಿ ವಿಚಾರದಲ್ಲಿ ಹಲವು ಚರ್ಚೆಗಳನ್ನು ಮಾಡಬೇಕಾಗುತ್ತೆ, ಸಮಯ ಬಂದಾಗ ನಾನು ತಿಳಿಸುತ್ತೇನೆ ಎಂದರು.