ರಾಮನಗರ: ಕುರಿಗಳನ್ನು ಮೇಯಿಸಲು ತೆರಳಿದ್ದ ತಂದೆ-ಮಗ ನೀರುಪಾಲಾದ ದಾರುಣ ಘಟನೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಕುರುಬಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದೆ. ರಾಜು (55) ಮತ್ತು ಪ್ರಸನ್ನ (24) ಮೃತ ತಂದೆ-ಮಗ ಎಂದು ತಿಳಿದು ಬಂದಿದೆ.
ಕುರಿ ಸಾಕಾಣಿಕೆ ಮಾಡಿಕೊಂಡಿರುವ ಇವರು, ಎಂದಿನಂತೆ ಅವುಗಳನ್ನು ಮೇಯಿಸಲು ತೆರಳಿದ್ದರು. ಕುರುಬಳ್ಳಿ ಗೇಟ್ ಬಳಿ ಇರುವ ಕೆರೆಯಲ್ಲಿ ಕುರಿಗಳ ಮೈತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಒಬ್ಬರು ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ಕಾಪಾಡಲು ಹೋದ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ರಾಜು ಅವರಿಗೆ ಪತ್ನಿ ಹಾಗೂ ಇನ್ನೊಬ್ಬ ಮಗ ಇದ್ದಾನೆ.

ಘಟನೆ ನಡೆದ ಸ್ವಲ್ಪ ಸಮಯದ ನಂತರ ಅಕ್ಕಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಅನುಮಾನಗೊಂಡು ನೋಡಿದಾಗ ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ. ತಕ್ಷಣ ಗ್ರಾಮಸ್ಥರಿಗೆ ತಿಳಿಸಿದ್ದು, ಗ್ರಾಮದ ಜನ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳದ ಸಹಾಯದೊಂದಿಗೆ ಶವಗಳ ಶೋಧ ಕಾರ್ಯ ನಡೆಸಿದರು. ತೆಪ್ಪ ಮತ್ತು ಬಲೆಯನ್ನು ಬಳಸಿ ನೀರಿನಲ್ಲಿ ಮುಳುಗಿದ್ದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮೃತರ ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು (ಶನಿವಾರ) ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಹಸುಗಳ ಮೈ ತೊಳೆಯಲು ಹೋದ ರೈತ ನೀರಿನಲ್ಲಿ ಮುಳುಗಿ ಸಾವು