ರಾಮನಗರ: ಮಹಾಶಿವರಾತ್ರಿ ಹಬ್ಬಕ್ಕೆ ಮಾಂಸಹಾರ ಸೇವನೆ ನಿಷಿದ್ಧ. ಆದರೆ ಬೊಂಬೆನಾಡಿನಲ್ಲಿ ಇದಕ್ಕೆ ವಿರುದ್ಧವಾದ ಸಂಪ್ರದಾಯವಿದೆ. ಶಿವ ದೇವರ ಇನ್ನೊಂದು ಸ್ವರೂಪವಾದ ಸಿದ್ದಪ್ಪಾಜಿಗೆ ಮಾಂಸದ ಅಡುಗೆ ನೈವೇದ್ಯ ಸಮರ್ಪಿಸಿ ಸಾವಿರಾರು ಭಕ್ತರು ಮಾಂಸಹಾರ ಸೇವಿಸಿ ಶಿವನನ್ನು ಆರಾಧಿಸುತ್ತಾ ಜಾಗರಣೆ ಮಾಡುತ್ತಾರೆ.
ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬವನ್ನು ಕಠಿಣ ವ್ರತಾಚರಣೆಯ ಮೂಲಕ ಸಂಭ್ರಮ, ಸಡಗರ, ಭಕ್ತಿ, ಭಾವಗಳಿಂದ ಆಚರಿಸಲಾಗುತ್ತದೆ. ಅನೇಕರು ರಾತ್ರಿ ಇಡೀ ಜಾಗರಣೆ ಮಾಡುತ್ತಾರೆ. ಅದರೆ ಇಲ್ಲೊಂದು ಗ್ರಾಮದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಮಾಸಂದೂಟ ಸವಿದು ಶಿವನನ್ನು ಆರಾಧಿಸುತ್ತಾರೆ.
ದೇವರಿಗೆ ಮಾಂಸದೂಟದ ನೈವೇದ್ಯ: ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಹಬ್ಬದ ದಿನದಂದೇ ದೇವಸ್ಥಾನದ ಭಕ್ತರೆಲ್ಲ ಸೇರಿ ಮಾಂಸದೂಟ ತಯಾರು ಮಾಡುತ್ತಾರೆ. ದೇವಸ್ಥಾನದ ಬಳಿಯೇ ಪ್ರಸಾದ ಸವಿದು ನಂತರ ಇಡೀ ರಾತ್ರಿ ಹರ ನಾಮಸ್ಮರಣೆ ಮಾಡುತ್ತಾ ಎಚ್ಚರವಾಗಿದ್ದು ಶಿವರಾತ್ರಿ ಆಚರಣೆ ಮಾಡುತ್ತಾರೆ.
ಇದನ್ನೂ ಓದಿ: 7 ಲಕ್ಷ ರುದ್ರಾಕ್ಷಿ ಮಣಿಗಳಿಂದ ನಿರ್ಮಾಣಗೊಂಡ ಶಿವಲಿಂಗ! ನೋಡಿ
ಸುಮಾರು 70 ಗ್ರಾಮಗಳಲ್ಲಿನ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ ತಂದು ಬಲಿಕೊಟ್ಟು ದೇವಾಲಯದ ಬಳಿ ಪ್ರಸಾದ ತಯಾರು ಮಾಡುತ್ತಾರೆ. ಆ ನಂತರ ದೇವರಿಗೆ ಕೋಳಿಸಾರು, ಕುರಿ-ಮೇಕೆ ಗೊಜ್ಜು, ಮುದ್ದೆ ನೈವೇದ್ಯ ಇಟ್ಟು ಪ್ರಸಾದ ಸಮರ್ಪಣೆ ಮಾಡುತ್ತಾರೆ. ನಂತರ ದೇವಸ್ಥಾನದ ಮುಂಭಾಗದಲ್ಲಿ ಸಾಮೂಹಿಕವಾಗಿ ಕುಳಿತು ಪ್ರಸಾದ ಸೇವಿಸುತ್ತಾರೆ.
ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಿಂದ ಭಕ್ತರು ಭಾಗಿ: ಕಳೆದ ಎರಡು ವರ್ಷ ಕೊರೊನಾ ಭೀತಿಯ ನಡುವೆಯೂ ಹಬ್ಬ ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಭೀತಿ ಇಲ್ಲದ ಕಾರಣ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಲಾಗಿದೆ. ಶಿವರಾತ್ರಿಯ ಮಾಂಸದೂಟಕ್ಕಾಗಿ ಭಕ್ತರು ಸುಮಾರು 300 ಕೋಳಿಗಳನ್ನು ಸಮರ್ಪಣೆ ಮಾಡಿದ್ದರು. ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನು ಸೇವಿಸಿದರು.
ಶಿವರಾತ್ರಿ ಹಬ್ಬಕ್ಕೆ ಮಾಂಸಹಾರ ಸೇವಿಸಿ ಇಡೀ ರಾತ್ರಿ ಶಿವನನ್ನು ಆರಾಧಿಸುವ ವಿಶಿಷ್ಟ ಆಚರಣೆಗೆ ಕೇವಲ ದೇವಾಲಯದ ಸುತ್ತಮುತ್ತಲಿನ ಜನರಷ್ಟೇ ಅಲ್ಲದೇ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿರುವ ಸಿದ್ದಪ್ಪಾಜಿ ಸ್ವಾಮಿ ಭಕ್ತರು ಆಗಮಿಸಿದ್ದರು. ಜೊತೆಗೆ ಹೊರ ರಾಜ್ಯಗಳಿಂದಲೂ ಭಕ್ತರು ಮಂಗಾಡಹಳ್ಳಿಯ ಸಿದ್ದಪ್ಪಾಜಿ ಸ್ವಾಮಿ ದೇವಾಲಯಕ್ಕೆ ಆಗಮಿಸಿ ಮಾಂಸದೂಟ ಮತ್ತು ಜಾಗರಣೆ ಪದ್ಧತಿಯಲ್ಲಿ ಪಾಲ್ಗೊಂಡರು.
ಶಿವರಾತ್ರಿಯ ದಿನದಂದು ಮಾಂಸದೂಟ ಸೇವಿಸಿ ಇಡೀ ರಾತ್ರಿ ಶಿವನನ್ನು ಅರಾಧಿಸುತ್ತಾ ಜಾಗರಣೆ ಮಾಡುವ ಪದ್ಧತಿ ಕಳೆದ ಎಂಟು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ದೂರವಾಗಲಿ ಎಂದು ದೇವಸ್ಥಾನಕ್ಕೆ ಬಂದು ಹರಕೆ ಹೊತ್ತುಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಕೋಳಿ ಕುರಿ ನೀಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.
ಇದನ್ನೂ ಓದಿ: ಮಹಾಶಿವರಾತ್ರಿ: ಶಿವನ ಆರಾಧನೆಯಲ್ಲಿ ತೊಡಗಿದ ಶಿವಮೊಗ್ಗ ಜನತೆ