ರಾಮನಗರ: ಜಿಲ್ಲಾ ಕೇಂದ್ರದಲ್ಲಿ 63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಪರಿಶೀಲನೆ ನಡೆಸಿದರು.
ಬೆಂಗಳೂರಿನಿಂದ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರನ್ನು ಕರೆದುಕೊಂಡು ಬಂದಿದ್ದ ಅಶ್ವತ್ಥ ನಾರಾಯಣ, ಇಡೀ ಆಸ್ಪತ್ರೆಯನ್ನು ಸುತ್ತು ಹಾಕಿ, 6 ತಿಂಗಳಲ್ಲಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಣಿಪಾಲ್ ಆಸ್ಪತ್ರೆಯ ತಜ್ಞರು ಹೊಸ ಆಸ್ಪತ್ರೆಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತಿ ಹೊಂದಿದ್ದು, ಇಂತಹ ಆಸ್ಪತ್ರೆ ನಿರ್ಮಾಣಕ್ಕೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಜಾಗತಿಕ ಗುಣಮಟ್ಟದ ಎಲ್ಲ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಇರುತ್ತವೆ. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಪರಿಕರಗಳನ್ನು ಅಳವಡಿಸಲಾಗುವುದು. ಬೆಂಗಳೂರು-ಮೈಸೂರು ರಸ್ತೆಯ ಆಯಕಟ್ಟಿನಲ್ಲಿರುವ ಈ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲಾಗುವುದು. ಇದಕ್ಕೆ ಸಂಬಂಧಿಸಿ ತಜ್ಞ ವೈದ್ಯರ ಜತೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತದೆ ಎಂದು ತಿಳಿಸಿದರು.