ರಾಮನಗರ: ತಾಲೂಕಿನ 344 ಮತ್ತು ಮಾಗಡಿ ತಾಲೂಕಿನ 697 ಜನವಸತಿ ಪ್ರದೇಶಗಳ ಒಟ್ಟು 87,099 ಮನೆಗಳಿಗೆ ನಲ್ಲಿ ಸಂಪರ್ಕ ಕೊಟ್ಟು ನದಿ ಮೂಲದ ಶುದ್ಧ ಕುಡಿಯುವ ನೀರು ಒದಗಿಸುವ ಒಟ್ಟು ರೂ. 825 ಕೋಟಿ ವೆಚ್ಚದ ಎರಡು ಪ್ರಮುಖ ಯೋಜನೆಗಳಿಗೆ ಸಚಿವ ಸಂಪುಟ ಸಭೆಯು ಇಂದು ಅನುಮೋದನೆ ನೀಡಿದೆ.
ಜಲಜೀವನ್ ಮಿಷನ್ ಅಡಿಯ ಈ ಯೋಜನೆಗಳಿಂದ ಎರಡು ತಾಲೂಕುಗಳ 3,65,000 ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮೊದಲನೆಯದಾಗಿ, 670 ಕೋಟಿ ರೂ. ವೆಚ್ಚದ ಮಂಚನಬೆಲೆ ಜಲಾಶಯದಿಂದ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಹಾಗೂ ಎರಡನೆಯದಾಗಿ, ವೈ.ಜಿ.ಗುಡ್ಡ ಜಲಾಶಯದಿಂದ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಇದು ಒಳಗೊಂಡಿದೆ ಎಂದರು.
ಮಂಚನಬೆಲೆ ಯೋಜನೆಯಡಿಗೆ ಮಾಗಡಿ ತಾಲೂಕಿನ 625 ಜನವಸತಿಗಳು ಮತ್ತು ರಾಮನಗರ ತಾಲೂಕಿನ 250 ಜನವಸತಿಗಳು ಒಳಪಡುತ್ತವೆ. ಮತ್ತೊಂದು ಯೋಜನೆಯಾದ ವೈ.ಜಿ.ಗುಡ್ಡ ಯೋಜನೆಯು ರೂ 155 ಕೋಟಿ ವೆಚ್ಚದಾಗಿದ್ದು, ಈ ವ್ಯಾಪ್ತಿಗೆ ರಾಮನಗರ ತಾಲೂಕಿನ 94 ಜನವಸತಿಗಳು ಮತ್ತು ಮಾಗಡಿ ತಾಲೂಕಿನ 72 ಜನವಸತಿಗಳು ಸೇರುತ್ತವೆ.
ಈ ಯೋಜನೆಗಳಿಂದ ರಾಮನಗರ ತಾಲೂಕಿನ 39,816 ಮನೆಗಳಿಗೆ ಹಾಗೂ ಮಾಗಡಿ ತಾಲೂಕಿನ 47,283 ಮನೆಗಳಿಗೆ ಉಪಯೋಗವಾಗುತ್ತದೆ. ಮಂಚನಬೆಲೆ ಯೋಜನೆಯನ್ನು 23 ತಿಂಗಳೊಳಗೆ ಹಾಗೂ ವೈ.ಜಿ.ಗುಡ್ಡ ಯೋಜನೆಯನ್ನು 15 ತಿಂಗಳೊಳಗೆ ಪೂರ್ತಿಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ 30 ವರ್ಷಗಳ, ಅಂದರೆ 2053ರವರೆಗಿನ ಜನಸಂಖ್ಯೆಯನ್ನು ಲೆಕ್ಕಾಚಾರ ಹಾಕಿ ಅದಕ್ಕೆ ತಕ್ಕಂತೆ ರೂಪಿಸಿರುವ ಯೋಜನೆಗಳು ಇವಾಗಿವೆ ಎಂದರು.
ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ 255 ಜನವಸತಿಗಳಿಗೆ ರಾವತ್ನಹಳ್ಳ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಪಿ.ಎಸ್.ಆರ್. ತಯಾರಿ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಕನಕಪುರ ತಾಲೂಕಿನ ಬಾಕಿ ಜನವಸತಿಗಳನ್ನು ಈ ಯೋಜನೆಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ರಾಜ್ಯದಲ್ಲಿ ಸದ್ಯಕ್ಕೆ ಗದಗ ಜಿಲ್ಲೆಯಲ್ಲಿ ಮಾತ್ರ ಶೇ.100ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕವಿದ್ದು, ರಾಮನಗರ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಪ್ರತಿಯೊಂದು ಮನೆಗೂ ನದೀಮೂಲದ ಕುಡಿಯುವ ನೀರು ಒದಗಿಸಲಾಗುವುದು ಎಂದು ನಮ್ಮ ಸರ್ಕಾರ ಮಾತು ಕೊಟ್ಟಿತ್ತು.
ಆ ವಾಗ್ದಾನವನ್ನು ನಾವು ಉಳಿಸಿಕೊಂಡಿದ್ದು, ಇದಕ್ಕಾಗಿ ವಿಶೇಷವಾಗಿ ಮುಖ್ಯಮಂತ್ರಿಯವರನ್ನು ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ. ಈಗ ಹೊಸದಾಗಿ ಅನುಮೋದನೆ ಸಿಕ್ಕಿರುವ ಯೋಜನೆಗಳಿಗೆ ತಕ್ಷಣವೇ ಕಾಮಗಾರಿ ಕೈಗೊಳ್ಳುವ ದಿಸೆಯಲ್ಲಿ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.