ರಾಮನಗರ: ನಾನು ಅಧಿಕೃತವಾಗಿ ಎಲ್ಲಿಯೂ ಮಾಡನಾಡಿಲ್ಲ. ಅದು ನನ್ನ ಧ್ವನಿ ಎಂದು ನಾನು ಹೇಳಲ್ಲ. ವೈಯಕ್ತಿಕವಾಗಿ ಮಾತನಾಡಿರಬಹುದು ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಆಡಿಯೋ ಲೀಕ್ ವಿಚಾರವಾಗಿ ತಿಳಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ನನ್ನ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದ್ದು, ಆದರೆ ಅದನ್ನ ವೈಭವಿಕರಿಸುವುದು ಎಷ್ಟು ಸರಿ. ಮಾಧ್ಯಮದಲ್ಲಿ ಚರ್ಚೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಇನ್ನು ಹಳೇ ಮೈಸೂರು ಭಾಗದ ಸಂಘಟನೆ ವಿಚಾರವಾಗಿ ಅಲ್ಲಿ ಮಾತನಾಡಿರಬಹುದು. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಚಾಣಕ್ಯನ ಕಾಲದಿಂದಲೂ ಸಹ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಯಾವುದೇ ಷಡ್ಯಂತ್ರಕ್ಕೆ ತಲೆಕೆಡಿಸಿಕೊಳ್ಳಲ್ಲ. ನನ್ನ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ತಿಳಿಸುತ್ತೇನೆ. ನಾನು ಅಶ್ವತ್ಥ ನಾರಾಯಣ ಬಗ್ಗೆ ಮಾತನಾಡಿಲ್ಲ. ಅಶ್ವತ್ಥ ನಾರಾಯಣ ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಾಮಾನ್ಯವಾಗಿ ಮಾತನಾಡಿದ್ದೇನೆ ಅಷ್ಟೇ ಎಂದರು.
ಕುಮಾರಸ್ವಾಮಿ ಒಂದು ರೀತಿ ವಲಸೆ ಹಕ್ಕಿ: ಕುಮಾರಸ್ವಾಮಿ ಒಂದು ರೀತಿ ವಲಸೆ ಹಕ್ಕಿ ಇದ್ದ ಹಾಗೆ. ರಾಮನಗರ, ಚಿಕ್ಕಬಳ್ಳಾಪುರ ನಂತರ ಈಗ ಚನ್ನಪಟ್ಟಣಕ್ಕೆ ಬಂದಿದ್ದಾರೆ. ಅವರಿಗೆ ಒಂದೇ ಕ್ಷೇತ್ರ ಅಂತ ಯಾವುದೂ ಇಲ್ಲ. ಚುನಾವಣೆಯಲ್ಲಿ ಗೆಲ್ಲುತ್ತಾರೆ ಮತ್ತೆ ಬೇರೆ ಕಡೆ ಹೋಗುತ್ತಾರೆ. ರಾಮನಗರದಲ್ಲಿ ಈಗಾಗಲೇ ಅಭಿವೃದ್ಧಿ ಕುಂಠಿತ ಆಗಿರುವ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ರಾಮನಗರದಲ್ಲಿ ಮಗನನ್ನು ಬೆಳೆಸ ಬೇಕು ಎಂದು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
ಹಳೆ ಮೈಸೂರು ಬಾಗದಲ್ಲೂ ಪಕ್ಷ ಸಂಘಟನೆ: ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರ ಹಾಗೂ ಹಳೇ ಮೈಸೂರು ಭಾಗಕ್ಕೆ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವಾಗಿ ಹಲವರ ಗಮನದಲ್ಲಿದೆ. ನಾನು ಸಹ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಬೆಂಗಳೂರು ಸುತ್ತಲೂ ಪಕ್ಷಕ್ಕೆ ಅಧಿಕಾರ ಇಲ್ಲ ಎಂಬುದನ್ನು ಗಮನಕ್ಕೆ ತರಲಾಗಿದೆ. ಈ ಭಾಗದಲ್ಲಿ ಪಕ್ಷ ಹೆಚ್ಚಿನ ಗಮನಹರಿಸಲಿಲ್ಲ. ನಾನು ಸಹ ಈ ಬಗ್ಗೆ ಸಭೆಯಲ್ಲಿಯೇ ಮಾತನಾಡಿದ್ದೇನೆ. ರಾಮನಗರದಲ್ಲಿಯೂ ಸಹ ನಾಯಕರು ಬರ್ತಾರೆ, ಸಂಘಟನೆ ಮಾಡುತ್ತಾರೆ ಎಂದರು.
ಚುನಾವಣಾ ಉದ್ದೇಶದಿಂದ ಸಂಪುಟ ವಿಸ್ತರಣೆ: ಸಂಕ್ರಾಂತಿ ನಂತರ ಬದಲಾವಣೆಗಳು ಸಹಜ ಅದರಂತೆ ಸಂಪುಟದಲ್ಲೂ ಬದಲಾವಣೆ ಸಾಧ್ಯತೆ ಇದೆ. ಈಗ ಬೊಮ್ಮಾಯಿ ಅವರದ್ದು ಸಂಪೂರ್ಣ ಸಂಪುಟ ಅಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರೇ ಒತ್ತು ನೀಡುತ್ತಿದ್ದಾರೆ. ಮುಂದಿನ ಚುನಾವಣೆ ಮತ್ತು ಪಕ್ಷದ ಬದಲಾಣೆಯ ದೃಷ್ಟಿಯಿಂದ ಸಂಪುಟದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಕೇಂದ್ರ ಯಾವ ರೀತಿಯ ನಿರ್ಧಾರ ತೆಗೆದು ಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕು ಎಂದು ಪ್ರತಿಕ್ರಿಯೆ ನೀಡಿದರು.
ಬಿಜೆಪಿಗೆ ಬರಲಿದ್ದಾರೆ ಸುಮಲತಾ: ಅಲ್ಲದೆ ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರ ಮಾತನಾಡಿ, ನಮ್ಮ ವರಿಷ್ಠರ ಜೊತೆಗೆ ಈ ಬಗ್ಗೆ ಮಾತನಾಡಿದ್ದೇನೆ. ಆದಷ್ಟು ಬೇಗ ತೀರ್ಮಾನ ಆಗಬಹುದು. ಅವರ ಬಳಿಯೂ ಮಾತನಾಡಿದ್ದೇವೆ. ಅಲ್ಲದೇ ಮಂಡ್ಯದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಜನಸೇವೆಗೆ ಅವಕಾಶ ಇಲ್ಲ ಎಂಬುದು ಸುಮಲತಾ ಅವರಿಗೂ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ’ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ‘ ಯೋಗೇಶ್ವರರದ್ದು ಎನ್ನಲಾದ ಆಡಿಯೋ ವೈರಲ್: ಇದು ಫೇಕ್ ಎಂದ ಎಂಎಲ್ಸಿ