ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಜಲಕಂಟಕ ಎದುರಾಗಿದೆ. ಮಂಚನಬೆಲೆ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಚನ ಬೆಲೆ ಸಮೀಪ ಇರುವ ಸೇತುವೆ ಸಂಪೂರ್ಣ ಕುಸಿದಿದ್ದು, ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಮನಗರ ಜಿಲ್ಲೆಗೆ ಜಲಕಂಕಟ ಎದುರಾಗಿದ್ದು, ಅರ್ಕಾವತಿ, ಶಿಂಷಾ ಹಾಗೂ ಕಣ್ವಾ ಜಲಾಶಯಗಳು ತುಂಬಿ ಹರಿಯುತ್ತಿದೆ. ಈ ನಡುವೆ ಬೆಂಗಳೂರು ಸುತ್ತ ಮುತ್ತಲ ಹೆಚ್ಚು ಮಳೆಯಾಗುತ್ತಿರುವುದರಿಂದ ಮಂಚನಬೆಲೆ ಜಲಾಶಯಕ್ಕೂ ಕೂಡ ಅತಿ ಹೆಚ್ಚು ನೀರು ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ನೀರನ್ನ ಕ್ರಸ್ಟ್ ಗೇಟ್ ಮೂಲಕ ಹರಿ ಬಿಡಲಾಗುತ್ತಿದೆ.
ಪ್ರತಿ ದಿನ 30 ಸಾವಿರಕ್ಕೂ ಅತಿ ಹೆಚ್ಚು ಕ್ಯೂಸೆಕ್ ನೀರನ್ನ ಡ್ಯಾಂ ನಿಂದ ಬಿಡಲಾಗುತ್ತಿದೆ. ನೀರಿನ ರಭಸಕ್ಕೆ ಮಂಚನಬೆಲೆ ಸಮೀಪ ಇರುವ ಸೇತುವೆ ಸಂಪೂರ್ಣವಾಗಿ ಕುಸಿದಿದೆ. ಇನ್ನು ಸುಗ್ಗನಹಳ್ಳಿ, ಕೂಟಗಲ್, ಶ್ಯಾನಬೋಗನಹಳ್ಳಿ, ಯರೇಹಳ್ಳಿ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಬಾಳೆ, ತೆಂಗು, ಸೀಮೆ ಹಲ್ಲು ಬೆಳೆ ಸಂಪೂರ್ಣ ನಾಶವಾಗಿದೆ. ರಾತ್ರಿಯಿಡೀ ಮಳೆ ಸುರಿದ ಹಿನ್ನೆಲೆ ರಾಮನಗರದ ಸೀರಹಳ್ಳ ತುಂಬಿ ಹರಿಯುತ್ತಿದ್ದರಿಂದ ತಗ್ಗು ಪ್ರದೇಶದ ಬಡಾವಣೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ನಗರ ಪ್ರದೇಶಕ್ಕೂ ಮಳೆ ನೀರು: ಕಳೆದ ಬಾರಿ ಭಾರಿ ಮಳೆಯಿಂದ ಸೀರಹಳ್ಳ ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಜೀಯಾವುಲ್ಲಾ ಬ್ಲಾಕ್, ಗೌಸಿಯಾ ನಗರ, ಯಾರಬ್ ನಗರ ಸೇರಿದಂತೆ ಐದಾರು ಬಡಾವಣೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಇದೀಗ ಮತ್ತೆ ಸೀರಳ್ಳ ತುಂಬಿ ಹರಿಯುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಮಂಚನಬೆಲೆ ಜಲಾಶಯದಿಂದ ನೀರು ಹೊರಕ್ಕೆ: ಅತಿಯಾದ ಮಳೆಯಿಂದ ಮಾಗಡಿಯ ಮಂಚನ ಬೆಲೆ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಅರ್ಕಾವತಿ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಅರ್ಕಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೆ ಸೂಚನೆ ನೀಡಲಾಗಿದೆ.
ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ: ಅರ್ಕಾವತಿ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಅರ್ಕಾವತಿ ಜಲಾನಯನ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ. ಅರ್ಕಾವತಿ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ನೀರಿನ ಒಳ ಅರಿವು ಹೆಚ್ಚಾಗಿದ್ದು ಯಾವ ಸಮಯದಲ್ಲಾದರೂ ಜಲಾಶಯ ತುಂಬುವ ಸಂಭವವಿದ್ದು, ಯಾವ ಕ್ಷಣದಲ್ಲಾದರೂ ಜಲಾಶಯದ ಗೇಟ್ಗಳನ್ನು ತೆರೆದು ನೀರನ್ನು ಹೊರ ಬಿಡುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಾರಿ ಮಳೆಗೆ ಲಕ್ಕೇನಹಳ್ಳಿ ಬಳಕೆಗುಡ್ಲು ನಡುವಿನ ರಸ್ತೆ ಸಂಪರ್ಕ ಕಡಿತ..