ರಾಮನಗರ/ತುಮಕೂರು: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಮಠದ ಸ್ವಾಮೀಜಿ ಡಾ.ಮೃತ್ಯುಂಜಯಶ್ರೀ ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ, ಇಂದು ಸ್ಥಳ ಮಹಜರು ನಡೆಸಿದರು.
ಕಣ್ಣೂರು ಮಠ ಹಾಗೂ ತುಮಕೂರಿನ ಸಿದ್ದಗಂಗಾ ಮಠಕ್ಕೆ ಮೃತ್ಯುಂಜಯ ಸ್ವಾಮೀಜಿಯನ್ನು ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದರು. ಮಹಜರು ವೇಳೆ ಬಂಡೆ ಮಠದ ನಕಲಿ ಸೀಲ್ ಪತ್ತೆಯಾಗಿದೆ. ತುಮಕೂರಿನ ಹಳೇ ಮಠದಲ್ಲಿ ಕಣ್ಣೂರು ಶ್ರೀಗಳ ವಾಸ್ತವ್ಯದ ಕೊಠಡಿಯನ್ನೂ ಪೊಲೀಸರು ಪರಿಶೀಲನೆ ಮಾಡಿದರು. ಈ ವೇಳೆ ಮಠದಲ್ಲಿದ್ದ ಭಕ್ತರು ಕಣ್ಣೂರು ಶ್ರೀ ವಿರುದ್ಧ ಆಕ್ರೋಶ ಹೊರಹಾಕಿದರು.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಗಡಿ ಠಾಣೆ ಪೊಲೀಸರು ಕಳೆದ 3 ದಿನದಿಂದ ಮೃತ್ಯುಂಜಯಶ್ರೀ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು, ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ 2ನೇ ಆರೋಪಿಯ ಮೊಬೈಲ್ ಬಗ್ಗೆ ಹೊಂದಿರುವ ಜ್ಞಾನಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆರೋಪಿ ಮಹಿಳೆ ಕಳೆದ 6 ತಿಂಗಳ ಮೊಬೈಲ್ ಡೇಟಾ ಡಿಲೀಟ್ ಮಾಡಿದ್ದು, ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ನಾಶಪಡಿಸಿರುವ ಅನುಮಾನ ಕೂಡ ವ್ಯಕ್ತವಾಗಿದೆ. ಪ್ರಸ್ತುತ ಹೊಸ ಮೊಬೈಲ್ ಉಪಯೋಗಿಸುತ್ತಿದ್ದು, ಈ ಹಿಂದೆ ತೆಗೆದ ಎಲ್ಲಾ ವಿಡಿಯೋವನ್ನು ಕೂಡ ಡಿಲೀಟ್ ಮಾಡಿದ್ದಾರೆಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಮಾಡಿಸಿದ್ದ ಆರೋಪದ ಮೇಲೆ ಕಣ್ಣೂರು ಮಠದ ಸ್ವಾಮೀಜಿ ಹಾಗೂ ಹನಿಟ್ರ್ಯಾಪ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ಆರೋಪ ಹೊತ್ತ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
(ಓದಿ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್.. ಕಣ್ಣೂರು ಮಠದ ಸ್ವಾಮೀಜಿ, ಯುವತಿ ಸೇರಿ ಮೂವರು ಅರೆಸ್ಟ್)