ರಾಮನಗರ : ಜಿಲ್ಲೆಯಲ್ಲಿ ದೇವಸ್ಥಾನಗಳ ಹುಂಡಿ ಕಳವು ಮತ್ತು ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಆರೋಪಿಗಳನ್ನು ಬಂದಿಸಿದ್ದಾರೆ.
ದೇವಸ್ಥಾನದ ಹುಂಡಿ ಕದಿಯುತ್ತಿದ್ದ ಕನಕಪುರ ತಾಲೂಕಿನ ಮುದುವಾಡಿ ಗ್ರಾಮದ ರವಿ ಅಲಿಯಾಸ್ ಶ್ರೀಧರ(28), ಕೆಂಪರಾಜು (22), ನಾರಾಯಣ (56) ಬಂಧಿತ ಆರೋಪಿಗಳು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ಕುಂಬಳಗೂಡು, ಮಾಗಡಿ, ಚನ್ನಪಟ್ಟಣ ಗ್ರಾಮಾಂತರದಲ್ಲಿ ತಲಾ ಒಂದರಂತೆ ಒಟ್ಟು 7 ಪ್ರಕರಣಗಳು ಬೆಳಕಿಗೆ ಬಂದಿವೆ. ಕೀಲಿ ತಯಾರಿಕ ಕಾರ್ಮಿಕರಾಗಿದ್ದ ಇವರು ಯಾವುದೇ ದೇವಾಲಯ ಕಂಡರೂ ಹುಂಡಿ ಕದ್ದು ಪರಾರಿಯಾಗುತ್ತಿದ್ದರು.
ಇನ್ನು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದು. ನಿಂಗೇಗೌಡನದೊಡ್ಡಿ ಗ್ರಾಮದ ಮಹಮ್ಮದ್ ಇಸ್ಮಾಯಿಲ್ ಅಲಿಯಾಸ ಇಸ್ಮಾಯಿಲ್ ಬಿನ್ ಮಹಮ್ಮದ್(25) ಮತ್ತು ಗವಿಪುರಂ ಲೇಔಟ್ ನಿವಾಸಿ ದರ್ಶನ್ ಬಿನ್ ರಂಗಸ್ವಾಮಿ(20) ಬಂಧಿತ ಆರೋಪಿಗಳು.
ಬಿಡದಿ ಪೊಲೀಸ್ ಠಾಣೆಯಲ್ಲಿ 4, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 1, ಕನಕಪುರ ಗ್ರಾಮಾ೦ತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಬಂಧಿತರಿಂದ ಟಿವಿ, ಚಿನ್ನಾಭರಣಗಳು ಸೇರಿದಂತೆ ಸುಮಾರು 8. 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.