ರಾಮನಗರ: ತಾಲೂಕಿನಲ್ಲಿ ಟ್ಯೂಶನ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ ನಾಲ್ಕಕ್ಕೆ ಏರಿಕೆ ಆಗಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕಿ ಇಂದು ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನಿಂದ ಆಕ್ರೋಶಗೊಂಡಿರುವ ಸಂಬಂಧಿಕರು ರಸ್ತೆಯಲ್ಲಿ ಮೃತ ಬಾಲಕಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಜ್ಞಾನೇಶ್ವರಿ (7) ಸಾವನ್ನಪ್ಪಿದ ಬಾಲಕಿ.
ಆಗಸ್ಟ್ 9 ರಂದು ಮಾಗಡಿಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಪಘಾತ ಘಟನೆ ನಡೆದಿತ್ತು. ಅಪಘಾತದಲ್ಲಿ ಈ ಹಿಂದೆ 3 ಮಕ್ಕಳು ಸಾವನ್ನಪ್ಪಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ಬಾಲಕಿ ಇಂದು ಅಸುನೀಗಿದ್ದಾಳೆ. ರಾಜು - ಶಾಂತಕುಮಾರಿ ದಂಪತಿಯ ಮಗಳಿ ಜ್ಞಾನೇಶ್ವರಿಯಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಗಳ ಸಾವಿನ ನಂತರ ಕುಟುಂಬದವರು ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಇವರು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಆಗಸ್ಟ್ 9 ರಂದು ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಮಗು ಎರಡ್ಮೂರು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಮೃತಪಟ್ಟಿತ್ತು. ಘಟನೆ ನಡೆದ ದಿನ ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ ನೀಡಿ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಮಕ್ಕಳಿಗೆ ಗುದ್ದಿ ಎಸ್ಕೇಪ್ ಆಗಿದ್ದ ಗೂಡ್ಸ್ ವಾಹನ ಚಾಲಕ ತನ್ನ ವಾಹನವನ್ನು ಬೇರೆಡೆ ನಿಲ್ಲಿಸಿ ಎಸ್ಕೇಪ್ ಆಗಿದ್ದ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ರಸ್ತೆ ಅಪಘಾತಕ್ಕೆ ಒಬ್ಬ ಬಲಿ: ಭಾನುವಾರ ಹುಬ್ಬಳ್ಳಿಯ ಹೊರವಲಯದ ಗದಗ ರಸ್ತೆಯ ರಿಂಗ್ ರೋಡ್ ಬಳಿ ಮೂರು ವಾಹನಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿರುವ ಘಟನೆ ನಡೆದಿತ್ತು. ದುರಂತದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಚಾಲಕ ರಫೀಕ್ ನದಾಫ್ (34) ಎಂಬವರು ಮೃತಪಟ್ಟವರು.
ಮುಂದೆ ನಿಂತಿದ್ದ ಲಾರಿ ಚಾಲಕನ ಬಳಿ ಪತ್ರಗಳನ್ನು ಪಡೆಯಲು ರಫೀಕ್ ನದಾಫ್ ಕೆಳಗಿಳಿದು ನಿಂತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ವಾಣಿಜ್ಯ ತೆರಿಗೆ ಇಲಾಖೆಯ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮುಂದೆ ನಿಂತಿದ್ದ ಲಾರಿಗೂ ಗುದ್ದಿದೆ. ಪರಿಣಾಮ ರಫೀಕ್ ಸಾವನ್ನಪ್ಪಿದ್ದು, ಇಲಾಖೆಯ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ್ ದೊಡ್ಡಮನಿ ಹಾಗೂ ಇಲಾಖೆಯ ಇನ್ಸ್ಪೆಕ್ಟರ್ ಈಶ್ವರ ಸುಧೆ ಸ್ವಲ್ಪದರಲ್ಲೇ ಪಾರಾಗಿದ್ದರು. ಘಟನೆ ಕುರಿತಂತೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Ramanagar accident: ಟ್ಯೂಶನ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವು