ರಾಮನಗರ: ಮದುವೆಯಾಗಿ 2 ವರ್ಷ ಮಕ್ಕಳಾಗದಿದ್ದರಿಂದ ಬೇಸತ್ತ ಮಹಿಳೆ ತಾನು ಗರ್ಭಿಣಿಯಾಗದಿದ್ದರೂ ಗಂಡನ ಮನೆಯವರಿಂದ ಗರ್ಭಿಣಿಯಂತೆ 9 ತಿಂಗಳು ನಟಿಸಿ, ಸೀಮಂತವನ್ನೂ ಮಾಡಿಸಿಕೊಂಡು ವಾಮ ಮಾರ್ಗದಲ್ಲಿ ಮಗು ಪಡೆದು ಸಿಕ್ಕಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ನೌಕರನನ್ನ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಮಹಿಳೆಗೆ ಮದುವೆಯಾಗಿ 2 ವರ್ಷಗಳು ಕಳೆದಿದ್ದರೂ ಮಕ್ಕಳಾಗುವ ಯೋಗ ಬಂದಿರಲಿಲ್ಲ. ತನಗೆ ಮಗುವಾಗುವುದಿಲ್ಲ ಎಂದು ಅರಿತು ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿಗೆ ತಾನೇ ಜನ್ಮ ನೀಡಿದ್ದೇನೆಂದು ನಂಬಿಸಲು, ಬರೋಬ್ಬರಿ 9 ತಿಂಗಳು ಗರ್ಬಿಣಿಯಂತೆ ನಟಿಸಿ, ಸೀಮಂತವನ್ನು ಮಾಡಿಸಿಕೊಂಡು ತವರು ಮನೆಗೆ ಬಂದಿದ್ದಾರೆ.
ಚಾಲಕಿತನದಿಂದ ಹೆರಿಗೆ ಸಮಯಕ್ಕೆ ಹೆಣ್ಣು ಮಗುವನ್ನು ಕೂಡ ಖರೀದಿಸಿದ್ದಾರೆ. ಆದರೆ, ಇದೀಗ ಅಂಗನವಾಡಿ ಕಾರ್ಯಕರ್ತೆಯ ವಿಚಾರಣೆಯಿಂದ ಆಕೆಯ ಅಸಲಿಯತ್ತು ಬಟ ಬಯಲಾಗಿದೆ. ಆ ಮಹಿಳೆ ಜೊತೆ ಮಗು ಮಾರಾಟ ಮಾಡಿದವರು ಜೈಲು ಪಾಲಾಗಿದ್ದಾರೆ.
ಚನ್ನಪಟ್ಟಣದ ಸಮೀಪದಲ್ಲೇ ಇರುವ ಅಪ್ಪಗರೆ ಗ್ರಾಮದ ಸುಷ್ಮಾ ಎನ್ನುವವರೇ ಈ ಸಾಹಸಕ್ಕೆ ಕೈ ಹಾಕಿ ಸಿಕ್ಕಿಬಿದ್ದಿರುವ ಮಹಿಳೆ. ಸರ್ಕಾರದ ನಿಯಮಾವಳಿಯ ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸದೇ, ಅನಧಿಕೃತವಾಗಿ 10 ದಿನದ ಹೆಣ್ಣು ಮಗುವಿನ ಪಾಲನೆ ಮಾಡುತ್ತಿದ್ದನ್ನು ಗಮನಿಸಿದ ಅಂಗನವಾಡಿ ಕಾರ್ಯಕರ್ತೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ನಂತರ ಅಧಿಕಾರಿಗಳು ಒಂದು ವಾರದೊಳಗೆ ಮಗುವಿನ ಜನನ ಪ್ರಮಾಣ ಪತ್ರ ಹಾಗೂ ತಾಯಿ ಕಾರ್ಡ್ ಇಲಾಖೆಗೆ ಒದಗಿಸುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ, ಯಾವುದೇ ದಾಖಲೆಗಳನ್ನ ಇಲಾಖೆಗೆ ಕೊಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಶಿಶು ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಯ್ಯ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ದತ್ತು ಪ್ರಕರಣ ಬಯಲು:
ಶಿಶು ಅಭಿವೃದ್ಧಿ ಅದಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತುಕೊಂಡಿದ್ದ ಪೊಲೀಸರು ಕೊನೆಗೂ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ತಾಯಿ ಸುಷ್ಮಾ ಎರಡು ವರ್ಷಗಳ ಹಿಂದೆ ಬಿಬಿಎಂಪಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಎಂಬುವರನ್ನ ಮದುವೆ ಮಾಡಿಕೊಂಡಿದ್ದರು. ಆದ್ರೆ ಗರ್ಭಿಣಿಯಾಗುವುದಿಲ್ಲ ಎಂದು ಖಚಿತ ಪಡಿಸಿಕೊಂಡಿದ್ದ ಸುಷ್ಮಾ ನಾನು ಗರ್ಭಿಣಿಯಾಗಿದ್ದೇನೆ ಎಂದು ಗಂಡನ ಮನೆಯವರನ್ನ ನಂಬಿಸಲು ನಿರ್ಧಿರಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಮಗುಪಡೆಯಲು ಆರೋಪಿತೆ ಮಾಡಿದ ಪ್ಲಾನ್ ಏನು?
ಇನ್ನು ತಾನೂ ಗರ್ಭಿಣಿ ಎಂದು ಆಗಾಗ್ಗೆ ಹಣ ಪಡೆದು ಚಿಕಿತ್ಸೆ ಪಡೆದುಕೊಳ್ಳುತ್ತಿರೋದಾಗಿ ಮನೆಯವರನ್ನ ನಂಬಿಸಿ ಬಿಟ್ಟಿದ್ದಾಳೆ. 9 ತಿಂಗಳು ಕಳೆಯುತ್ತಿದ್ದಂತೆ ಗಂಡನ ಮನೆಯಲ್ಲಿ ಸೀಮಂತ ಮಾಡಿಸಿಕೊಂಡು ತಾಯಿಯ ಮನೆಗೆ ಹೋಗಿದ್ದಳು. ಮಗು ಖರೀದಿ ಮಾಡುವ ನಿಟ್ಟಿನಲ್ಲಿ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ವಾಸಿಸುತ್ತಿರುವ, ಈ ಹಿಂದೆ ಆಸ್ಪತ್ರೆಯಲ್ಲಿ ದಾದಿ ಕೆಲಸ ಮಾಡುತ್ತಾ, ಜೊತೆಗೆ ಮಗು ಮಾರಾಟ ಮಾಡುವ ದಂಧೆ ಕೂಡ ನಡೆಸುತ್ತಿದ್ದ ಮಹಿಳೆಯನ್ನು ಸುಷ್ಮಾ ಪರಿಚಯ ಮಾಡಿಕೊಂಡಿದ್ದಾಳೆ.
ಗಂಡನ ಮನೆಯಿಂದ ಸೀಮಂತ ಮುಗಿಸಿ ಬಂದು ಹೆರಿಗೆ ದಿನಾಂಕದ ವೇಳೆಗೆ 70 ಸಾವಿರ ಹಣ ಕೊಟ್ಟು 10 ದಿನದ ಹೆಣ್ಣು ಮಗುವನ್ನು, ಮಗು ಮಾರಾಟ ದಂಧೆ ನಡೆಸುತ್ತಿದ್ದ ನಿವೃತ್ತ ದಾದಿಯಿಂದ ಖರೀದಿಸಿದ್ದಾಳೆ. ಗಂಡನ ಮನೆಯವರು ಕೂಡ ಸುಷ್ಮಾ ಮಗುವಿಗೆ ಜನ್ಮ ನೀಡಿದ್ದಾಳೆಂದು ನಂಬಿದ್ದರು.
ಅಂಗನವಾಡಿ ಕಾರ್ಯಕರ್ತೆಗೆ ಬಂದಿತ್ತು ಅನುಮಾನ
ಆದರೆ, ಅಂಗನವಾಡಿ ಕಾರ್ಯಕರ್ತೆಯ ಅನುಮಾನದಿಂದ ಕೊನೆಗೆ ಸುಷ್ಮಾ ನಡೆಸಿದ ಮಹಾ ಮೋಸ ಬೆಳಕಿದೆ ಬಂದಿದೆ. ಪ್ರಕರಣ ಸಂಬಂಧ ಶಿಶು ಮಾರಾಟ ಜಾಲ ಅಡಿಯಲ್ಲಿ ಪೊಲೀಸರು ಸುಷ್ಮಾ, ರವಿ ಕುಮಾರ್, ಶಾರದಮ್ಮ, ಜಯಲಕ್ಷ್ಮಿ, ಲಕ್ಷ್ಮಿ ಎಂಬ ಐದು ಮಂದಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆಂದು ಎಸ್ಪಿ ಗಿರೀಶ್ ತಿಳಿಸಿದ್ದಾರೆ.
ಖರೀದಿಸಿದ್ದು ಹೆಣ್ಣು ಮಗು, ಸೋಲೂರಿನ ಶಿಶು ಮಂದಿರದಲ್ಲಿ ತನ್ನ ಹೆತ್ತ ತಾಯಿ ಮಡಿಲು ಸೇರಿದೆ. ಜಾಲದ ಹಿಂದೆ ಮತ್ತಷ್ಟು ಜನರ ಕೈವಾಡ ಇದೆಯೇ ಎಂಬುದನ್ನ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.