ರಾಮನಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ವೈದ್ಯರಲ್ಲಿಯೂ ಪಾಸಿಟಿವ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರಿ ವೈದ್ಯರನ್ನ ಬಲಿ ಪಡೆದಿದೆ.
ಕೊರೊನಾ ಸಾಂಕ್ರಾಮಿಕ ರೋಗ ಇದುವರೆಗೆ ಜಿಲ್ಲೆಯಲ್ಲಿ ಸುಮಾರು ಹನ್ನೊಂದು ಜನರನ್ನು ಬಲಿ ಪಡೆದಿದ್ದು, ಜೊತೆಗೆ 12ನೇಯವರಾಗಿ ಸರ್ಕಾರಿ ವೈದ್ಯರು ಸಹ ಮೃತಪಟ್ಟಿದ್ದಾರೆ.
ಮೃತ ವೈದ್ಯ ( 50 ವರ್ಷ ) ಮೂಲತಃ ಬೆಂಗಳೂರಿನವರು. ಇವರು ಕಳೆದ ಐದು ವರ್ಷಗಳಿಂದ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಒಂದು ತಿಂಗಳ ಹಿಂದೆಯಷ್ಟೆ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಇಪ್ಪತ್ತು ದಿನಗಳಿಂದ ಕೋಮಾ ಸ್ಥಿತಿ ತಲುಪಿದ್ದ ಡಾಕ್ಟರ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೇ ವೈದ್ಯ ಸಾವನ್ನಪ್ಪಿದ್ದಾರೆ.