ರಾಯಚೂರು : ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಸಿರವಾರ ಠಾಣೆ ಪೊಲೀಸರು ರಕ್ಷಣೆ ಒದಗಿಸುತ್ತಿಲ್ಲವೆಂದು ಯುವಕನ ತಾಯಿ ಆರೋಪಿಸಿದ್ದಾಳೆ. ಜಿಲ್ಲೆಯ ಲಿಂಗಸೂಗೂರಿನ ಮೀನಾಕ್ಷಿ ಅವರ ಮಗ ಅಮರೇಶ್ ಹಾಗೂ ಸಿರವಾರ ತಾಲೂಕಿನ ಸುಮಾ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಜುಲೈ 1ರಂದು ಇವರಿಬ್ಬರು ಲಿಂಗಸೂಗೂರು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಇವರು ಮೈಸೂರಿನಲ್ಲಿ ನೆಲೆಸಿದ್ದರು.
ಆದರೆ, ಸುಮಾಳ ತಂದೆ ಗೋವಿಂದಪ್ಪ ಹೊಸಮನಿ ಯುವತಿ ಕಾಣೆಯ ಕುರಿತು ಸಿರವಾರ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಅಮರೇಶನನ್ನು ಸಂಪರ್ಕಿಸಿ ರಕ್ಷಣೆ ನೀಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ. ಅಮರೇಶ್, ಸುಮಾ ಇಬ್ಬರು ಸಿರವಾರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆದ್ರೆ, ಪೊಲೀಸ್ ಠಾಣೆಗೆ ಬಂದಾಗ ಸುಮಾಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ರು. ಆಗ ಇಬ್ಬರನ್ನ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.
ಸಮಸ್ಯೆಯನ್ನ ಬಗೆಹರಿಸುವುದಾಗಿ ನಮ್ಮಗೆ 60 ಸಾವಿರ ರೂ. ಕೇಳಿದಾಗ, 40 ಸಾವಿರ ರೂ. ನೀಡಿದ್ದೇವೆ. ಅಲ್ಲದೇ ಅಮರೇಶ್ ತಂದಿರುವ ಕಾರನ್ನು 250 ಕಿ.ಮೀ. ಓಡಾಡಿಸಿದ್ದಾರೆ. ಪ್ರೇಮಿಗಳಿಗೆ ರಕ್ಷಣೆ ನೀಡದೆ ಸುಮಾ ಮನೆಯವರ ಪರವಾಗಿ ಪೊಲೀಸರು ಮಾತನಾಡುತ್ತಿದ್ದಾರೆ.
ತಮಗೂ ಸಹ ಸುಮಾ ಮನೆಯವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ತಮಗೆ ರಕ್ಷಣೆ ನೀಡಬೇಕೆಂದು ಯುವಕನ ತಾಯಿ ಮೀನಾಕ್ಷಿ ಒತ್ತಾಯಿಸಿದ್ದಾರೆ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.