ರಾಯಚೂರು : ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹಾಲಭಾವಿ ಗ್ರಾಮದ ಅಮರಪ್ಪ (40) ಪೊಲೀಸ್ ಪಾಟೀಲ್ ಮೃತ ದುರ್ದೈವಿ. ಪತ್ನಿ ಹೊಳೆಯಮ್ಮ ಅವರ ಸಂಬಂಧಿಕರಾದ ತಿಮ್ಮಣ್ಣ, ಮಹಾದೇವಮ್ಮ ಹಾಗೂ ರಂಗಪ್ಪ ತೊರಲಬೆಂಚಿ ವಿರುದ್ಧ ಮೃತನ ಸಹೋದರ ಬಸವರಾಜ ಪೊಲೀಸ್ ಪಾಟೀಲ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಮರಪ್ಪ ಮತ್ತು ಹೊಳೆಯಮ್ಮ ಅವರಿಗೆ 20 ವರ್ಷದ ಹಿಂದೆ ಮದುವೆ ಆಗಿತ್ತು. ಆಗಿನಿಂದಲೂ ಪತ್ನಿ ಮತ್ತು ಅವರ ಸಂಬಂಧಿಗಳು ಕಿರುಕುಳ ನೀಡುತ್ತ ಬಂದಿದ್ದರಂತೆ. ಜತೆಗೆ ಪತ್ನಿ ಹೊಳೆಯಮ್ಮ ತವರು ಮನೆ ತೊರಲಬೆಂಚಿಯಲ್ಲಿದ್ದಾಳೆ. ಆಗಾಗ ಗಂಡನ ಮನೆಗೆ ಬಂದು ಜಗಳ ಮಾಡಿ ಹೋಗುತ್ತಿದ್ದಳು ಎಂದು ದೂರಲಾಗಿದೆ.
ಶುಕ್ರವಾರ ಪತ್ನಿ ಬಳಿಗೆ ಹೋದಾಗ ಅಮರಪ್ಪನ ಮೇಲೆ ಆರೋಪಿತರು ಒಟ್ಟಾಗಿ ಹಲ್ಲೆ ನಡೆಸಿ, ಟ್ರ್ಯಾಕ್ಟರ್ ಕೊಡುವುದಿಲ್ಲ ಎಂದು ಅವಮಾನಿಸಿ ಕಳುಹಿಸಿದ್ದರಿಂದ ಸಂಜೆ ಮನೆ ಮೇಲ್ಭಾಗದ ಶೆಡ್ ರಾಡ್ಗೆ ಲುಂಗಿಯಿಂದ ನೇಣು ಹಾಕಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.