ರಾಯಚೂರು: ತಾಲೂಕಿನ ಯರಗೇರಾ ಗ್ರಾಮದ ಬಳಿಯ ನೂತನ ವಿಶ್ವವಿದ್ಯಾಲಯಕ್ಕೆ ನೀರಿನ ಅಭಾವ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.
250 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ನೂತನ ವಿವಿ ಆವರಣದಲ್ಲಿ ಇರುವ ಕಟ್ಟಡಗಳಿಗೆ ಮೂಲಸೌಕರ್ಯಗಳು ಕಲ್ಪಿಸಬೇಕಾಗಿದೆ. ಇಡೀ ವಿಶ್ವವಿದ್ಯಾಲಯಕ್ಕೆ ಒಂದೇ ಒಂದು ಕೊಳವೆ ಬಾವಿ ಇದೆ. ವಿವಿ ಸ್ಥಾಪನೆಗೂ ಮುನ್ನ ಕಲಬುರಗಿ ಸ್ನಾತಕೋತ್ತರ ಕಾಲೇಜು ಇತ್ತು. ಆಗಿನಿಂದಲೂ ಒಂದೇ ಬೋರವೆಲ್ ಮೇಲೆ ನಡೆಯುತ್ತಿತ್ತು. ಒಂದು ವೇಳೆ ಕೊಳವೆ ಬಾವಿ ಕೈಕೊಟ್ಟರೆ ನೀರಿನ ಅಭಾವ ಎದುರಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಇದೀಗ ನೂತನ ವಿಶ್ವವಿದ್ಯಾಲಯ ತಲೆ ಎತ್ತಿದೆ. ಕ್ಯಾಂಪಸ್ ನಿರ್ಮಾಣ ಮಾಡಬೇಕೆಂದರೆ ಮೊದಲ ಆದ್ಯತೆಯಾಗಿ ನೀರಿನ ಸವಲತ್ತು ಬೇಕಾಗುತ್ತದೆ. ಹೀಗಾಗಿ ಸರ್ಕಾರಕ್ಕೆ ತುಂಗಭದ್ರಾ ಇಲ್ಲವೆ, ಕೃಷ್ಣಾ ನದಿಯಿಂದ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ಪ್ರಸ್ತಾವನೆ ನೆನಗುದ್ದಿಗೆ ಬಿದಿದ್ದೆ.
ಸರ್ಕಾರ ನೂತನ ವಿಶ್ವವಿದ್ಯಾಲಯ ಘೋಷಣೆ ಮಾಡಿ, ಅನುದಾನ ಮೀಸಲಿರಿಸುವುದಾಗಲಿ ಅಗತ್ಯ ಅನುದಾನ ಒದಗಿಸುವುದಾಗಿ ಮಾಡಲಿಲ್ಲ. ಸದ್ಯ ಸಾವಿರಾರು ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿರುವ ವಿವಿ ಅಭಿವೃದ್ಧಿ ಆಗಬೇಕಿದ್ದರೆ ಸರ್ಕಾರ ಈ ಕಡೆ ಗಮನಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.