ರಾಯಚೂರು : ಕಾರ್ಮಿಕರಿಗೆ ಕೆಲಸ, ಸಂಬಳ, ಭತ್ಯೆಗಾಗಿ ಒತ್ತಾಯಿಸಿ ಸೆ.17ರಂದು ಕಲ್ಯಾಣ ಕರ್ನಾಟಕ ದಿನಾಚರಣೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶನದ ಹೋರಾಟ ನಡೆಸಲಾಗುವುದು ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್ ಮಾನಸಯ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭ ನೆಪವಾಗಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಹಾಗೂ ರೈತರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡುವ ಮೂಲಕ ರೈತ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿವೆ. ಕೋವಿಡ್ನಿಂದ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಯಾವುದೇ ನೆರವು ನೀಡಿಲ್ಲ, ಪ್ಯಾಕೇಜ್ ಕೇವಲ ಹೆಸರಿಗೆ ಮಾತ್ರವಾಗಿದೆ.
ಯಾರೊಬ್ಬರಿಗೂ ಪರಿಹಾರ ದೊರೆತ್ತಿಲ್ಲ. ಕೋವಿಡ್ ನಿರ್ವಹಣೆಯ ವೆಚ್ಚದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಯಾವುದೇ ಕಾರಣ ಹೇಳದೆ ಕೆಲಸದಿಂದ ವಜಾ ಮಾಡಿದ್ದು, ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಬಳವಿಲ್ಲ, ಹಟ್ಟಿ ಚಿನ್ನದ ಗಣಿ ಕಾರ್ಮಿಕರು 180 ಕೋಟಿ ರೂ. ಲಾಭ ನೀಡಿದ್ರೂ ಅವರ ಭತ್ಯೆ ಕಡಿತ ಮಾಡಲಾಗಿದೆ.
ಈ ಹಿನ್ನೆಲೆ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರಶ್ನಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹೋರಾಟ ಆರಂಭಿಸಲಾಗುತ್ತಿದೆ. ಸೆ.17ರಂದು ಕಲ್ಯಾಣ ಕರ್ನಾಟಕ ದಿನಾಚರಣೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುವುದು ಎಂದರು.