ರಾಯಚೂರು: ಕೊರೊನಾ ಲಾಕ್ಡೌನ್ ಹಿನ್ನೆಲೆ, ರಾಯಚೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ ಅತ್ಯಂತ ಕಡಿಮೆಯಾಗಿದ್ದು, ಆದಾಯಕ್ಕೂ ಕತ್ತರಿ ಬಿದ್ದಿದೆ.
ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಇಲಾಖೆಗಳ ಪೈಕಿ ಸಾರಿಗೆ ಇಲಾಖೆಯೂ ಒಂದು. ಹೊಸ ವಾಹನಗಳ ನೋಂದಣಿಯಿಂದ ಸಾರಿಗೆ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಈ ವರ್ಷ ಲಾಕ್ಡೌನ್ನಿಂದಾಗಿ ಆಟೋಮೊಬೈಲ್ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದರಿಂದ ವಾಹನಗಳ ಮಾರಾಟ ಕಡಿಮೆಯಾಗಿ ಕಂಪನಿಗಳು ನಷ್ಟ ಹೊಂದಿದ್ದರೆ, ವಾಹನಗಳ ನೋಂದಣಿಯಿಲ್ಲದೆ ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಯ ನಾಲ್ಕು ತಿಂಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
2019-20ನೇ ಸಾಲಿನಲ್ಲಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಗೆ ಮಾಸಿಕ 5.58 ಕೋಟಿ ರೂಗಳ ಗುರಿಯನ್ನು ನೀಡಲಾಗಿತ್ತು. 2019ನೇ ಸಾಲಿನ ಏಪ್ರಿಲ್ನಲ್ಲಿ ಶೇ. 81.74, ಮೇ ತಿಂಗಳಲ್ಲಿ ಶೇ. 90.34, ಜೂನ್ನಲ್ಲಿ ಶೇ. 97.17, ಜುಲೈನಲ್ಲಿ ಶೇ. 92.99ರಷ್ಟು ಗುರಿಯನ್ನು ಸಾಧಿಸಿದೆ. ಆದರೆ, 2020 ಸಾಲಿನಲ್ಲಿ ಕೊರೊನಾ ಕಾರಣದಿಂದಾಗಿ ಏಪ್ರಿಲ್ನಲ್ಲಿ ಶೇ. 18.10, ಮೇ ತಿಂಗಳಲ್ಲಿ ಶೇ. 47.39, ಜೂನ್ನಲ್ಲಿ ಶೇ. 85.45, ಜುಲೈನಲ್ಲಿ ಶೇ. 89.14ರಷ್ಟು ಗುರಿ ತಲುಪಿದೆ.
ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿವರ್ಷ ಮಾಸಿಕ 2 ರಿಂದ 3 ಸಾವಿರ ವಾಹನಗಳು ನೋಂದಣಿಯಾಗುತ್ತಿದ್ದವು. ಆದರೆ ಈ ಬಾರಿ ಕೊರೊನಾ ಲಾಕ್ಡೌನ್ನಿಂದಾಗಿ 2020ರ ಏಪ್ರಿಲ್ನಿಂದ ಜುಲೈವರೆಗೆ ಕೇವಲ 4,007 ದ್ವಿಚಕ್ರ ವಾಹನಗಳು, 240 ಕಾರು, 337 ಟ್ರ್ಯಾಕ್ಟರ್ಗಳು ಮಾತ್ರ ನೋಂದಣಿಯಾಗಿವೆ. ಲಾರಿ, ಟಿಪ್ಪರ್ ಸೇರಿದಂತೆ ಬೃಹತ್ ವಾಹನಗಳ ನೋಂದಣಿ ಬೆರಳೆಣಿಕೆಯಷ್ಟು ಮಾತ್ರ ಆಗಿವೆ.