ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಪಿಂಚಣಿಪುರ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಅಗ್ರಹಿಸಿ ಗುರುವಾರ ಮಹಿಳೆಯರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕೊರೊನಾ ವೈರಸ್ ಹೆಸರಲ್ಲಿ ಅಂಗಡಿ ಮುಗ್ಗಟ್ಟು ಬಂದ್ ಆಗಿದ್ದು, ಕೂಲಿ ಕೆಲಸ ಸಿಗದೆ ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ. ವಾರ್ಡ್ ಸದಸ್ಯರು ನಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಹಲವು ದಿನಗಳಿಂದ ಸಂಕಷ್ಟದಲ್ಲಿರುವ ಬಹುತೇಕ ವಾರ್ಡ್ ಜನತೆಗೆ ಪಡಿತರ ಕಿಟ್, ಹಾಲು ಇತರೆ ವಸ್ತು ಉಚಿತವಾಗಿ ನೀಡಲಾಗುತ್ತಿದೆ. ನಾವು ಮನುಷ್ಯರೇ ನಮಗೂ ಇತರರಿಗೆ ನೀಡುವ ಸೌಲಭ್ಯ ನೀಡಬೇಕು. ಇಲ್ಲವೆ ನಮಗೂ ಕೆಲಸ ಕೊಡಿಸಿ. ಕೂಲಿ ನೀಡಬೇಕು ಎಂದು ಕೋರಿದರು.
ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ಮಾತನಾಡಿ, ಸ್ಲಮ್ ಏರಿಯಾಕ್ಕೆ ಹಾಲು ವಿತರಣೆ ಮಾಡಲು ಆದೇಶ ಬಂದಿದೆ. ತಾವು ಸ್ಲಮ್ ನಿವಾಸಿಗಳ ಪಟ್ಟಿಯಲ್ಲಿ ಬರುವುದಿಲ್ಲ. ಹೀಗಾಗಿ ನೀಡಲು ಬರುವುದಿಲ್ಲ. ಪಡಿತರ ಕಿಟ್ ತಹಶೀಲ್ದಾರ ವ್ಯಾಪ್ತಿಗೆ ಬರುತ್ತದೆ ಎಂದು ಸಮಜಾಯಿ ಕೊಟ್ಟಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.