ರಾಯಚೂರು: ಲೈಂಗಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಯಲ್ಲಿ ಆಪ್ತ ಮಿತ್ರ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅವ್ಯವಹಾರ ನಡೆದಿಲ್ಲ. ಕೆಲ ಅರ್ಹ ಫಲಾನುಭವಿಗಳ ಮಾಹಿತಿ ಬಹಿರಂಗ ಪಡಿಸಲು ಬರುವುದಿಲ್ಲ ಎಂದು ಆಪ್ತ ಮಿತ್ರ ಸಂಘದ ಜಿಲ್ಲಾಧ್ಯಕ್ಷ ಮೌಲಾಲಿ ಸ್ಪಷ್ಟಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಆಪ್ತ ಮಿತ್ರ ಸಂಘಟನೆ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿದ್ದು, ಸರ್ಕಾರದ ಯೋಜನೆಗಳು ನಮ್ಮ ಸಂಘದ ಮೂಲಕ ಅರ್ಹ ಫಲಾನುಭವಿಗಳಿಗೆ ತುಲುಪಿಸುವಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಸರ್ಕಾರದ ಯೋಜನೆಯ ಸಾಲ ಸೌಲಭ್ಯ ಪಡೆದವರ ಮಾಹಿತಿ ನೀಡಲು ಬರುವುದಿಲ್ಲ ಎಂದರು.
ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕೆಲ ದಾಖಲಾತಿಗಳು ಅವಶ್ಯಕ, ಸಂಘದ ಮುಂದೆ ಯೋಜನೆಗಳ ಗುರಿ ಇರುವುದರಿಂದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಹಿನ್ನಡೆಯಾಗಬಾರದು ಎನ್ನುವ ಉದ್ದೇಶದಿಂದ ನಮ್ಮ ಸಮುದಾಯದ ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಇದರಲ್ಲಿ ಅನ್ಯ ಸಮುದಾಯದವರು ಯಾರೂ ಇಲ್ಲ. ಆದ್ಯತೆ ಮೇರೆಗೆ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಮೌಲಾಲಿ ಹೇಳಿದರು.