ಲಿಂಗಸುಗೂರು : ತಾಲೂಕಿನಲ್ಲಿ ಗುರುವಾರ ಸಂಜೆ ಬೀಸಿದ ಭಾರಿ ಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಮಳೆಗೆ ನೂರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತ ಪಪ್ಪಾಯಿ ಬೆಳೆ ನೆಲಕ್ಕುರುಳಿ ಕೋಟ್ಯಂತರ ರೂಪಾಯಿ ಬೆಳೆ ಹಾನಿಗೀಡಾಗಿದೆ.
ತಾಲೂಕಿನ ನೀರಲಕೇರಿ, ಈಚನಾಳ, ದೇವರಭೂಪುರ, ರಾಮಲೂಟಿ, ಫೂಲಭಾವಿ, ಕಾಳಾಪುರ, ಗುರುಗುಂಟ ಭಾಗದ ತೋಟಗಳಲ್ಲಿನ ಪಪ್ಪಾಯ ಗಿಡಗಳು ಬಹುತೆಕ ಕಡೆಗಳಲ್ಲಿ ನೆಲಕ್ಕುರುಳಿವೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೂ ಸಾಕಷ್ಟು ರೈತರು ಖರೀದಿದಾರರ ಸಮಸ್ಯೆಯಿಂದಾಗಿ ಕಟಾವಿಗೆ ಬಂದ ಹಣ್ಣಿನ ಫಸಲನ್ನೆಲ್ಲ ತಿಪ್ಪೆಗುಂಡಿಗೆ ಹಾಕುತ್ತ ಬಂದಿದ್ದರು. ಇದೀಗ ಗಿಡಗಳು ತುಂಡರಿಸಿ ನೆಲಸಮಗೊಂಡು ರೈತರು ಕಣ್ಣೀರು ಸುರಿಸುವಂತಾಗಿದೆ.
ತಾಲೂಕಿನಾದ್ಯಂತ ಸದ್ಯದ ಮಾಹಿತಿ ಪ್ರಕಾರ 300 ಎಕರೆಗೂ ಹೆಚ್ಚು ಪಪ್ಪಾಯಿ ಬೆಳೆ ನೆಲಕ್ಕುರುಳಿ ಅಂದಾಜು ₹5 ಕೋಟಿಯಷ್ಟು ನಷ್ಟವಾಗಿದೆ. ಸಮೀಕ್ಷೆ ನಂತರವೇ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಎಡಿ ಯೋಗೇಶ್ವರ್ ಹೇಳಿದರು.