ರಾಯಚೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಯುವ ಜನತೆಗೆ ನೀಡಿದ ಭರವಸೆಗಳು ಈಡೇರಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅನೀಲಕುಮಾರ ಯಾದವ್ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಹೇಳಿದ ಮಾತುಗಳನ್ನು ಮರೆತಿದೆ. ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಗಿದೆ. ಕೋವಿಡ್ನಿಂದ ದೇಶದಲ್ಲಿ ಕಠಿಣ ದಿನಗಳು ಬರಲಿವೆ ಎಂಬ ನಮ್ಮ ಪಕ್ಷದ ಮುಖಂಡರ ಎಚ್ಚರಿಕೆಯನ್ನು ಕಡೆಗಣಿಸಿದ್ದು, ಸುಳ್ಳು ಭರವಸೆಗಳಿಂದಲೇ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದೆ. ಕಾನೂನು ತಿದ್ದುಪಡಿ ಮೂಲಕ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯವ್ಯಾಪಿ ಸದಸತ್ವ ಅಭಿಯಾನ ನಡೆಸುತ್ತಿದ್ದು, ಅದರ ಭಾಗವಾಗಿ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದೆ. ಮೂರು ವರ್ಷ ಅವಧಿ ಮುಗಿದ ಸ್ಥಳಗಳಲ್ಲಿ ಚುನಾವಣೆ ನಡೆಯಲಿದ್ದು, ಸದಸ್ಯತ್ವಕ್ಕೆ ಡಿ.10 ಕೊನೆಯ ದಿನವಾಗಿದೆ. ದೇಶದ ಯುವ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.