ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಜಾವೂರಿನಿಂದ ಚಿತ್ತಾಪುರ ಮುಖ್ಯ ರಸ್ತೆ ಅಭಿವೃದ್ಧಿ ಹಂತದಲ್ಲಿಯೇ ಕಳಪೆ ಗುಣಮಟ್ಟ ಪ್ರದರ್ಶನಗೊಂಡು ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಲೊಕೋಪಯೋಗಿ ಇಲಾಖೆ ಈ ರಸ್ತೆ ಅಭಿವೃದ್ಧಿಗೆ 2 ಕಿ.ಮೀ. ರಸ್ತೆಗೆ ನಾಲ್ಕು ಸೇತುವೆ ದುರಸ್ತಿ ಸೇರಿದಂತೆ ರೂ. 2.50 ಕೋಟಿ ಅನುದಾನ ನಿಗದಿ ಮಾಡಿದೆ. ಆದರೆ ಸೇತುವೆ ದುರಸ್ತಿ ಮಾಡಿಲ್ಲ. ಅರ್ಥ್ ವರ್ಕ್ ಸರಿಯಾಗಿ ಆಗಿಲ್ಲ. ಹೀಗಾಗಿ ಅಭಿವೃದ್ಧಿ ಹಂತದಲ್ಲಿಯೇ ಕಿತ್ತು ಹೋಗಿದೆ. ಅರ್ಥ್ ವರ್ಕ ನಿಗದಿತವಾಗಿ ಮಾಡಿ ಗುಣಮಟ್ಟದ ಮರಮ್ (ಮಣ್ಣು) ಹಾಕಿರುವುದಿಲ್ಲ. ನಿಯಮಾನುಸಾರ ಕಂಕರ, ಮರಮ್ ಹಾಕಿ ರೋಲರ್ ಮಾಡದೆ ವೆಟ್ಮಿಕ್ಸ್ ಹಾಕಿದ್ದು, ವಾಹನಗಳು ಸಿಲುಕಿಕೊಳ್ಳುವಂತೆ ಆಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಸಹಾಯಕ ಎಂಜಿನಿಯರ್ ಅನಂದ ಈಟಿವಿ ಭಾರತದೊಂದಿಗೆ ಮಾತನಾಡಿ, ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆಲಸ ನಡೆಯುವಾಗಲೇ ಮಳೆ ಆರಂಭಗೊಂಡಿದ್ದರಿಂದ ಈ ರೀತಿ ಅಗಿದೆ. ಮಳೆ ನಿಂತ ಮೇಲೆ ನಿಯಮಾನುಸಾರ ಕೆಲಸ ಮಾಡಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.