ರಾಯಚೂರು: ಇಲ್ಲಿನ ಉಪಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿವೋರ್ವ ಸಾನ್ನಪ್ಪಿದ್ದು, ಈ ಬಗ್ಗೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹ್ಮದ್ ಶಫಿ (20) ಮೃತ ಕೈದಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ಮಹ್ಮದ್ ಶಫಿಯನ್ನ ರಾಯಚೂರಿನ ಸಬ್ಜೈಲಿನಲ್ಲಿರಿಸಲಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಕೈದಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಆದ್ರೆ ಇದನ್ನ ಮಹ್ಮದ್ ಶಫಿ ಪೋಷಕರು ತಳ್ಳಿಹಾಕಿದ್ದು, ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಫಿ ಮೃತಪಟ್ಟಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.
ಸುಮಾರು ನಾಲ್ಕೈದು ತಿಂಗಳ ಹಿಂದೆ ಕೊಲೆ ಆರೋಪದ ಮೇಲೆ ಶಫಿಯನ್ನು ಸಬ್ ಜೈಲಿಗೆ ತಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮೃತದೇಹವನ್ನ ರಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಪೋಷಕರು, ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇನ್ನು ಸ್ಥಳಕ್ಕೆ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಭೇಟಿ ನೀಡಿ ಈ ಕುರಿತು ಪ್ರತಿಕ್ರಿಯಿಸಿದರು. ಯುವಕನ ಸಾವಿನ ತನಿಖೆ ಕೈಗೊಳ್ಳಲಾಗುವುದು. ಶವ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಲಿದೆ. ಪಾಲಕರ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಇನ್ನು ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ 3ನೇ ಜೆಎಂಎಫ್‌ಸಿ ನ್ಯಾಯಾಧೀಶ ಅವಿನಾಶ್ ಅವರು ಶವಗಾರಕ್ಕೆ ಭೇಟಿ ಪರಿಶೀಲನೆ ನಡೆಸಿದ್ರು.