ರಾಯಚೂರು: ನಗರದ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯ ವೇಳೆ ಸ್ಥಳದಲ್ಲಿ ಚಾಕು, ಪಂಚ್ ಹಾಗೂ ಏರ್‌ಗನ್ ಪತ್ತೆಯಾಗಿವೆ. ನಗರದ ಶಾಲೆಯೊಂದರ ಮುಂಭಾಗ ಇಂದು ಬೆಳಗ್ಗೆ ಘಟನೆ ಜರುಗಿದೆ. 7ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೆಲ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕಳಕಪ್ಪ ಮಾತನಾಡಿ, ಶಾಲಾ ಪ್ರಾರ್ಥನಾ ಸಮಯಕ್ಕೂ ಮುಂಚೆ ಗಲಾಟೆ ನಡೆದಿದೆ. ಈ ಬಗ್ಗೆ ಪೋಷಕರೊಂದಿಗೂ ಮಾತನಾಡಿದ್ದೇನೆ. ಸದ್ಯ ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸ್ಥಳದಲ್ಲಿ ಏರ್‌ಗನ್ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿ, ಅದು ಏರ್‌ಗನ್ ಅಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಲಾಟೆಗೆ ಕಾರಣ: 7ನೇ ತರಗತಿಯ ವಿದ್ಯಾರ್ಥಿ ಎಂದಿನಂತೆ ಶಾಲೆಗೆ ಬಂದಿದ್ದ. ಬಳಿಕ ಸ್ನಾಕ್ಸ್ ತರಲು ಸೈಕಲ್ನಲ್ಲಿ ಅಂಗಡಿಗೆ ತೆರಳಿದ್ದಾನೆ. ಆದೆ ಮಾರ್ಗದಲ್ಲಿ ಬೈಕ್ನಲ್ಲಿ ನಿಂತಿರುವ ವಿದ್ಯಾರ್ಥಿಗೆ ಈತನ ಕಾಲು ತಾಕಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ ಎಂದು ಹೇಳಲಾಗುತ್ತಿದೆ.
ಶಾಲಾ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿದೆ. "ಗಲಾಟೆ ನಡೆದಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಶಾಲೆಯತ್ತ ಧಾವಿಸಿದ ಪೋಷಕರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದ ಬಗ್ಗೆ ಗೊತ್ತಾಯಿತು. ಯಾವ ಕಾರಣಕ್ಕೆ ಆಗಿದೆ ಎಂದು ತಿಳಿದಿಲ್ಲ ಎಂದು ಕೆಲ ಪೋಷಕರು ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರು: ವಸತಿ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ