ರಾಯಚೂರು: ಕೊರೊನಾ ಸೋಂಕಿನ ಎರಡನೇ ಅಲೆ ಎಲ್ಲರನ್ನು ಮಹಾಮಾರಿಯಂತೆ ಕಾಡುತ್ತಿದೆ. ಸೋಂಕಿನ ಭೀತಿ ನಡುವೆ ಫ್ರೆಂಟ್ ಲೈನ್ ವಾರಿಯರ್ಸ್ ಆಗಿ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ. ಹೀಗಾಗಿ ರಾಯಚೂರು ಪೊಲೀಸರು ತಮ್ಮ ಸಿಬ್ಬಂದಿ, ಅಧಿಕಾರಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಸ್ಟೀಮ್ ವ್ಯವಸ್ಥೆ ಮಾಡಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆವರಣದಲ್ಲಿನ ಡಿಎಆರ್ ಮುಖ್ಯ ಕಚೇರಿಯಲ್ಲಿ ಕರ್ತವ್ಯನಿರತ ಪೊಲೀಸರಿಗೆ ಸೋಂಕು ಹರಡಬಾರದೆಂದು ಆವಿ ತೆಗೆದುಕೊಳ್ಳುವ ಮಾರ್ಗ ಕಂಡುಕೊಳ್ಳಲಾಗಿದೆ. ಕೊರೊನಾ ಸೋಂಕು ಮನುಷ್ಯ ದೇಹ ಸೇರಲು ಎರಡ್ಮೂರು ದಿನಗಳಾದರೂ ಬೇಕಾಗುತ್ತದೆ. ಅಷ್ಟರೊಳಗೆ ಎಚ್ಚರಿಕೆ ವಹಿಸಿದಲ್ಲಿ ಸೋಂಕಿನಿಂದ ದೂರವಾಗಬಹುದೆಂಬ ಎನ್ನುವ ಕಾರಣಕ್ಕೆ ಈ ಸ್ಟೀಮಿಂಗ್ ಪ್ರಯೋಗ ಮಾಡಲಾಗಿದೆ. ಡಿಎಆರ್ಡಿಎಸ್ಪಿ ಸುನಿಲ್ ಪರಪ್ಪ ಕೊಡಲಿ ನೇತೃತ್ವದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಹೇಗಿದೆ ಸ್ಟೀಮ್ ವ್ಯವಸ್ಥೆ:
ಒಂದು ಗ್ಯಾಸ್ ಸಿಲಿಂಡರ್, ಫ್ರೆಶರ್ ಕುಕ್ಕರ್, ಗ್ಯಾಸ್ ಬರ್ನರ್, ಇಬ್ಬರು ಉಪಯೋಗಿಲು ಒಂದೆರಡು ಪೈಪ್ ಬಳಸಿ ಅತ್ಯಂತ ಸುಲಭವಾಗಿ ಸ್ಟೀಮ್ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಟೀಮ್‌ನಲ್ಲಿ ನೀರು, ಪುದಿನಾ, ತುಳಜಿ, ನೀಲಗಿರಿ ಎಲೆ, ವಿಕ್ಸ್, ಜಂಡು ಬಾಮ್, ಪಚ್ಚ ಕರ್ಪೂರದ ಪುಡಿಯನ್ನ ಬೇರೆಸಲಾಗುತ್ತದೆ. ಸಿಬ್ಬಂದಿ ಕರ್ತವ್ಯಕ್ಕೆ ತೆರಳುವ ಮುನ್ನ, ಕರ್ತವ್ಯ ಮುಗಿಸಿಕೊಂಡು ಬಂದ ಬಳಿಕ ಸ್ಟೀಮ್ ತೆಗೆದುಕೊಳ್ಳುವುದರಿಂದ ಸೋಂಕು ಹರಡದಂತೆ ತಡೆಯಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಸ್ಟೀಮ್ ವ್ಯವಸ್ಥೆ ರಾಯಚೂರು ಡಿಎಆರ್ ಹೆಡ್ ಕ್ವಾಟರ್ಸ್ನಲ್ಲಿ ಮಾತ್ರ ಪ್ರಯೋಗಾತ್ಮಕವಾಗಿ ಚಾಲ್ತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಕಡೆ ವಿಸ್ತರಣೆ ಮಾಡಬೇಕು ಎನ್ನುವ ಚಿಂತನೆ ನಡೆದಿದೆ. ಯಾಕೆಂದರೆ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವ 100ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆವಿ ಪಡೆದು ತೆರಳುತ್ತಾರೆ. ಬಳಿಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಾರೆ. ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಮನೆಯಲ್ಲಿ ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಂಡು ಸ್ಟೀಮಿಂಗ್ ತೆಗೆದುಕೊಳ್ಳುವ ವ್ಯವಧಾನ ಇರುವುದಿಲ್ಲ.