ಲಿಂಗಸಗೂರು : ಆಂದೋಲ ಶ್ರೀಗಳು, ಚೈತ್ರಾ ಕುಂದಾಪುರ ಮತ್ತು ನನ್ನನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧದ ಹಿಂದೆ ಬಿಜೆಪಿಯ ನಕಲಿ ಹಿಂದುತ್ವ ಮುಖವಾಡ ಬಹಿರಂಗಗೊಂಡಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆ ಆಳಂದ ಪಟ್ಟಣ ಮಸೀದಿ ಆವರಣದಲ್ಲಿನ ರಾಘವಚೈತನ್ಯರ ಸಮಾಧಿ ಮತ್ತು ಈಶ್ವರ ಲಿಂಗವಿದೆ. ಕೆಲ ಕಿಡಗೇಡಿಗಳು ಅದನ್ನ ಅಪವಿತ್ರಗೊಳಿಸಿದ್ದರು. ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ಇದನ್ನೂ ಓದಿ : ಕಲಬುರಗಿ ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಪ್ರವೇಶ ನಿರ್ಬಂಧ
ಮಹಾಶಿವರಾತ್ರಿ ನಿಮಿತ್ತ ಮಾಲಾಧಾರಿಗಳ ಸಮೇತ ಮಾರ್ಚ್ 1ರಂದು ಈಶ್ವರಲಿಂಗ ಶುದ್ಧೀಕರಿಸಿ ಪೂಜೆ ನೆರವೇರಿಸಲು ಮೂವರ ನೇತೃತ್ವದಲ್ಲಿ ಆಳಂದ ಚಲೋ ಕಾರ್ಯಕ್ರಮ ಆಯೋಜಿಸಿತ್ತು. ಜಿಲ್ಲಾಡಳಿತ ನಿಷೇಧ ಹೇರುವ ಮೂಲಕ ಹಿಂದುಗಳ ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಯುವಕರಿಗೆ ಕರೆ ನೀಡಲಾಗುತ್ತಿತ್ತು. ಈಗ ದೇಶ ಉಳಿಸಿಕೊಳ್ಳಿ ಎಂಬ ಆಂದೋಲನ ನಡೆಸಲು ಕರೆ ನೀಡುವಂತಾಗಿದೆ. ಜಿಲ್ಲಾಡಳಿತದ ಆದೇಶದ ಹಿಂದೆ ಹಿಂದುತ್ವದ ಹೆಸರಲ್ಲಿ ಆಡಳಿತ ನಡೆಸುವ ಬಿಜೆಪಿ ವಾಸ್ತವ ಮನೋಸ್ಥಿತಿ ಬಹಿರಂಗಗೊಂಡಿದೆ.
ರಾಷ್ಟ್ರ, ಹಿಂದುತ್ವ ರಕ್ಷಣೆ ಮಾಡುವವರ ಬರ್ಬರ ಕೊಲೆಗಳನ್ನು ಕೊಲೆ ಪ್ರಕರಣಕ್ಕೆ ಸೀಮಿತ ಬೇಡ. ದೇಶದ್ರೋಹ, ಕೊಕೊ ಕಾಯ್ದೆ ಸೇರಿದಂತೆ ಕಠಿಣ ಕಾನೂನು ಬಳಕೆ ಮಾಡಿ. ಇಲ್ಲವೇ ಎನ್‌ಕೌಂಟರ್ ಮೂಲಕ ತಕ್ಕ ಉತ್ತರ ನೀಡದಿದ್ದರೆ, ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.