ಸಿಂಧನೂರು (ರಾಯಚೂರು) : ಸುಕಾಲಪೇಟೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್ನ ದೊಡ್ಡ ಫಕೀರಪ್ಪ ಕೋಣದವರು, ಹೊನ್ನೂರಪ್ಪ, ಬೂದವಾಳ ಗ್ರಾಮದ ಹನುಮಂತ, ಸುಕಾಲಪೇಟೆಯ ಬದಲಿಂಗಪ್ಪ, ಅಮರೇಶ್ ಬಂಧಿತ ಆರೋಪಿಗಳು.
ಕಳೆದ ಜುಲೈ11ರಂದು ಕೌಟುಂಬಿಕ ಕಲಹ ಹಾಗೂ ಮೌನೇಶ್, ಮಂಜುಳಾ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುಳಾ ಕುಟುಂಬದವರು ಮೌನೇಶ್ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದರು. ಇನ್ನುಳಿದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.