ರಾಯಚೂರು : ಶಾಸಕ ಬಸವರಾಜ ದಢೇಸುಗೂರು ಪಿಎಸ್‌ಐ ಹಗರಣದಲ್ಲಿ ತಾವು ಭಾಗಿಯಾಗಿಲ್ಲ ಎಂದು ಹೇಳಿದರೆ, ತಮ್ಮನ್ನು ತನಿಖೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಪರಸಪ್ಪನ ಹತ್ತಿರ ಹಣ ತೆಗೆದುಕೊಂಡಿರುವ ಕುರಿತಂತೆ ದೂರವಾಣಿಯಲ್ಲಿ ಮಾತನಾಡಿರುವ ಧ್ವನಿಯನ್ನು ರೆಕಾರ್ಡ್ ಮಾಡುವ ಮೂಲಕ ಸಾಕ್ಷಿ ಸಮೇತವಾಗಿ ಬಹಿರಂಗಗೊಳಿಸಲಾಗಿದೆ. ಈ ಬಗ್ಗೆ ಶಾಸಕರು ನಾನು ಮಾತನಾಡಿರುವುದು ಎಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಹಗರಣದಲ್ಲಿ ತಾವು ಇಲ್ಲ ಎನ್ನುವುದಾದರೆ ಸರ್ಕಾರಕ್ಕೆ ತಾವೇ ಪತ್ರ ಬರೆದು, ಈ ಮೂಲಕ ತನಿಖೆಗೆ ಒಳಪಡಿಸುವಂತೆ ಹೇಳಲಿ ಎಂದು ಹೇಳಿದರು.
ಪಿಎಸ್‌ಐ ಹಗರಣದಲ್ಲಿ ಭಾಗಿಯಾದ ಕೆಲ ಅಧಿಕಾರಿಗಳನ್ನು ಸರ್ಕಾರ ಬಂಧಿಸಿದೆ. ಆದರೆ ಶಾಸಕರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಗರಣದ ಬಗ್ಗೆ ಈಗ ನಡೆಯುತ್ತಿರುವ ಸದನದಲ್ಲಿ ಸಿಪಿಎಲ್ ನಾಯಕರು ವಿಷಯ ಪ್ರಸ್ತಾಪಿಸಲಿದ್ದು, ಚರ್ಚೆಯ ಬಳಿಕ ಸರ್ಕಾರದಿಂದ ಬರುವ ಉತ್ತರದಿಂದ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ವಿಮ್ಸ್ನ ಐಸಿಯುನಲ್ಲಿ ಸಾವು ಪ್ರಕರಣ.. ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಪರಿಶೀಲನೆ