ರಾಯಚೂರು: 2015ರಲ್ಲಿ ಹೈದರಾಬಾದ್ ಮೂಲದ ಡಾ. ಪ್ಯೂರಿಫೈ ಕಂಪನಿ ರಾಯಚೂರಿನಲ್ಲಿ 5 ಕಡೆಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನ ಪ್ರಾರಂಭಿಸಿದ್ದು, ಎಲ್ಲಾ ಘಟಕಗಳು ಸಾರ್ವಜನಿಕ ಉದ್ಯಾನವನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಪ್ರೀಂಕೋರ್ಟ್ ಅದೇಶದ ಅನ್ವಯ ಸರ್ಕಾರದ ಉದ್ಯಾನವನ ಹಾಗೂ ಆಟದ ಮೈದಾನದ ಸುತ್ತಮುತ್ತಲಿನ ಜಾಗವನ್ನ ವ್ಯಾಪಾರೀಕರಣ ಹಾಗೂ ವಸತಿಗೆ ಬಳಸಿಕೊಳ್ಳಬಾರದು ಎಂಬ ನಿಯಮವಿದೆ.
ಸುಪ್ರೀಂಕೋರ್ಟ್ ನಿಯಮವನ್ನ ಉಲ್ಲಂಘನೆ ಮಾಡಿ ಹೈದರಾಬಾದ್ನ ವಾಟರ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಕಂಪನಿ ಎಲ್ಬಿಎಸ್ ನಗರ, ನಿಜಲಿಂಗಪ್ಪ ಕಾಲೋನಿ, ಜವಾಹರ್ ನಗರ, ಜ್ಯೋತಿ ಕಾಲೋನಿ ಸೇರಿದಂತೆ ನಗರದ 5 ಕಡೆ ಸಾರ್ವಜನಿಕ ಉದ್ಯಾನವನ ಸ್ಥಳದಲ್ಲಿ ಹಾಗೂ ಗಾರ್ಡನ್ಗೆ ಮೀಸಲಾದ ಸ್ಥಳದಲ್ಲಿಯೇ ಈ ನೀರಿನ ಘಟಕ ಸ್ಥಾಪನೆ ಮಾಡಿದ್ದು, ನಗರಸಭೆಯೇ ಪರವಾನಗಿ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಈ ಕಂಪನಿಯ ಪ್ರಾರಂಭಕ್ಕೆ ಪರವಾನಗಿ ಪಡೆಯಲು ಯಾವುದೇ ಅರ್ಜಿ ಹಾಕದೇ, ನಗರಸಭೆಯ ಜೊತೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳ ಕಾರ್ಯಾಲಯದ ಜೊತೆ ಕೇವಲ ದೂರವಾಣಿ ಸಂಭಾಷಣೆಯಲ್ಲಿ ಪರವಾನಗಿ ಪಡೆಯಲಾಗಿದೆ ಎನ್ನಲಾಗಿದೆ.
ಈ ವಿಚಾರ ಮಹೆಬೂಬ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯಲ್ಲಿ ಬಯಲಾಗಿದೆ. ಈ ನೀರು ಶುದ್ಧೀಕರಣ ಘಟಕ ಸ್ಥಳೀಯ ಬೋರವೆಲ್ ನೀರನ್ನೇ ಶುದ್ಧೀಕರಣಗೊಳಿಸಿ ಪ್ರತಿ ಬಿಂದಿಗೆಗೆ 8 ರೂಪಾಯಿ ಹಾಗೂ ಕ್ಯಾನ್ಗೆ 10 ರೂಪಾಯಿ ದರ ನಿಗದಿಪಡಿಸಿದೆ. ಬರದ ಹಿನ್ನೆಲೆಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಪ್ರತಿ ದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವ ಈ ಕಂಪನಿಗೆ ವರವಾಗಿದೆ.