ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡಬೇಕು ಎಂಬ ಒತ್ತಾಯ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೇಳಿ ಬಂದಿದೆ.
ಈ ಕುರಿತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರಾದ ಮಲ್ಲಪ್ಪಗೌಡ ಮಾಲಿ ಪಾಟೀಲ್ ಹಾಗೂ ಬಂದಯ್ಯ ಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅರಕೇರಾವನ್ನು ನೂತನ ತಾಲೂಕಾಗಿ ರಚನೆ ಮಾಡಲು ಮುಂದಾಗಿರುವ ಶಾಸಕ ಶಿವನಗೌಡ ನಾಯಕರ ನಡೆ ಖಂಡನೀಯ. ತಮ್ಮ ಸ್ವಗ್ರಾಮದ ಪ್ರೀತಿಯಿಂದ ಪ್ರಸ್ತಾವನೆ ಸಲ್ಲಿಸಿದ್ದು ಅವೈಜ್ಞಾನವಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದಿದ್ದಾರೆ.
ಗಬ್ಬೂರು ಅತಿ ದೊಡ್ಡ ಹೋಬಳಿ ಹಾಗೂ 50 ಕ್ಕೂ ಅಧಿಕ ಗ್ರಾಮಗಳನ್ನು ಒಳಗೊಂಡಿದೆ. ಭೌಗೋಳಿಕ ವಿಸ್ತೀರ್ಣ, ಐತಿಹಾಸಿಕ ಹಿನ್ನೆಲೆ ಹಾಗೂ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದು ತಾಲೂಕು ರಚನೆಗೆ ಎಲ್ಲಾ ಅರ್ಹತೆ ಹೊಂದಿದೆ ಎಂದರು.
ಆದ್ರೆ ಅರಕೇರಾ ಗ್ರಾಮದ ರಚನೆಯ ಹಿಂದೆ ಶಾಸಕ ಶಿವನಗೌಡ ನಾಯಕ ಅವರ ರಾಜಕೀಯ ಉದ್ದೇಶ ಅಡಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಕೂಡಲೇ ಅರಕೇರಾ ತಾಲೂಕು ರಚನೆಯ ಪ್ರಸ್ತಾಪ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ರದ್ದುಪಡಿಸಿ, ಗಬ್ಬೂರನ್ನು ತಾಲೂಕನ್ನಾಗಿ ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಗಬ್ಬೂರಿನಿಂದ ರಾಯಚೂರಿನ ಡಿಸಿ ಕಚೇರಿವರೆಗೆ ಪಾದಯಾತ್ರೆ ಮಾಡಿ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.