ರಾಯಚೂರು: ಜಿಲ್ಲೆಯಲ್ಲಿರುವ 5700 ಜನ ಸೋಂಕಿತರನ್ನು ಐಸೋಲೇಷನ್ ಮಾಡಲು ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುತ್ತಿದೆ. ಬೆಡ್,ಆಕ್ಸಿಜನ್, ರೆಮ್ಡಿಸಿವಿರ್ ಸೇರಿದಂತೆ ಯಾವುದೇ ವೈದ್ಯಕೀಯ ಸಾಮಗ್ರಿಗಳ ಕೊರತೆಯಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ. ಪ್ರತಿ ತಾಲೂಕಿನಲ್ಲಿ 500 ಹಾಸಿಗೆಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ರೋಗಿಗಳನ್ನು ಮೂರು ವರ್ಗಗಳಾಗಿ ವಿಗಂಡಿಸಿ ಚಿಕಿತ್ಸಾ ವ್ಯವಸ್ಥೆ ಮಾಡಲಾಗುತ್ತದೆ. ಸೋಂಕು ಇರುವವರಿಗೆ ಕೋವಿಡ್ ಕೇರ್ ಸೆಂಟರ್, ಖಾಸಗಿ ಲಾಡ್ಜ್ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಲಾಡ್ಜ್ಗಳಲ್ಲಿರಲು ಬಯಸುವವರು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಮನೆಯಲ್ಲಿ ಐಸೋಲೇಷನ್ ಆಗಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಚೈನ್ ಬ್ರೇಕ್ ಮಾಡಲು ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ : ಸಚಿವ ಲಿಂಬಾವಳಿ
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ. 315KL ಆಕ್ಸಿಜನ್ ಲಭ್ಯವಿದೆ. ನಿತ್ಯವೂ 15KL ಬೇಡಿಕೆಯಿದೆ. ಮೂರು ದಿನಗಳಿಗೆ ಆಗುವಷ್ಟು ದಾಸ್ತಾನು ಮಾಡಲಾಗಿದೆ. ಇಂದು ಕೂಡ 15KL ಸರಬರಾಜಾಗಿದೆ. ಒಂದು ದಿನ ರಾಯಚೂರಿಗೆ ಬರುವ ಆಕ್ಸಿಜನ್ ಟ್ಯಾಂಕರ್ ಕರ್ನೂಲ್‌ಗೆ ತೆಗೆದುಕೊಂಡು ಹೋಗಿದ್ದರಿಂದ ಕೆಲವೇ ಗಂಟೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪೂರ್ವಾನುಮತಿಯಿಲ್ಲದೇ ಟ್ಯಾಂಕರ್ ತೆಗೆದುಕೊಂಡು ಹೋಗಿರುವ ಲಾರಿ ಮಾಲೀಕರ ವಿರುದ್ಧ ಕ್ರಮಕ್ಕೆ ಈಗಾಗಲೇ ಎಡಿಜಿಪಿ ಪ್ರತಾಪ ರೆಡ್ಡಿಯವರಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ರಾಯಚೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಾದ ಯಾದಗಿರಿ, ಬೀದರ್, ಚಾಮರಾಜನಗರ, ಕೊಡಗು ಸೇರಿದಂತೆ ಎಲ್ಲೆಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರೆಮ್ಡಿಸಿವಿರ್ ಲಸಿಕೆ ದಾಸ್ತಾನಿದೆ. 2,872 ಸರ್ಕಾರಿ, 3,472 ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಐಸಿಯು, ವೆಂಟಿಲೇಟರ್,ಆಕ್ಸಿಜನ್ ಸೇರಿದಂತೆ ಅಗತ್ಯ ವ್ಯವಸ್ಥೆಯಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಯನ್ನು ನೀಗಿಸಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರದಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ನಂತರ ಎಲ್ಲವೂ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.