ರಾಯಚೂರು: ರಾಜ್ಯದ ನಾನಾ ಭಾಗಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಪವನ ಶಕ್ತಿ, ಜಲ ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದರಿಂದ ಶಾಖೋತ್ಪನ್ನ ಕೇಂದ್ರಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಅದರಲ್ಲಿ ಜಿಲ್ಲೆಯಲ್ಲಿ ಆರ್ಟಿಪಿಎಸ್ನ ಇತಿಹಾಸ ಪುಟದಲ್ಲಿ ಮೊಟ್ಟಮೊದಲ ಬಾರಿಗೆ ತಿಂಗಳಿಗೂ ಹೆಚ್ಚಿನ ಕಾಲ ಕೇಂದ್ರವನ್ನು ಬಂದ್ಗೊಳಿಸಲಾಗಿದೆ.
ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಇದರಿಂದ ರಾಜ್ಯದಲ್ಲಿರುವ ಕಲ್ಲಿದ್ದಲ್ಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದ್ದು, ಬೃಹತ್ ಶಾಖೋತ್ಪನ್ನ ಕೇಂದ್ರಗಳಿಗೆ ವಿಶ್ರಾಂತಿ ನೀಡಲಾಗಿದೆ.
ತಾಲೂಕಿನ ಶಕ್ತಿನಗರದ ಬಳಿ ಬರುವ ಬೃಹತ್ ಶಾಖೋತ್ಪನ್ನ ಕೇಂದ್ರ (ಆರ್ ಟಿಪಿಎಸ್)ದಲ್ಲಿ ಕಳೆದ ಜು.5ರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಆರ್‌ಟಿಪಿಎಸ್ ಕೇಂದ್ರದಲ್ಲಿ ಒಟ್ಟು 8 ಘಟಕಗಳು ಕಾರ್ಯನಿರ್ವಹಿಸುತ್ತವೆ.
ಒಟ್ಟು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1ರಿಂದ7 ಘಟಕಗಳು ತಲಾ 210 ಮೆಗಾವ್ಯಾಟ್, 8ನೇ ಘಟಕ 250 ಮೆಗಾವ್ಯಾಟ್ ಉತ್ಪಾದಿಸುತ್ತವೆ. ಆದರೆ, ಇದೀಗ ಕೊರೊನಾ ಲಾಕ್ಡೌನ್ ಪರಿಣಾಮ ಕೈಗಾರಿಕೆಗಳು ಸೇರಿದಂತೆ ಹಲವು ಉದ್ಯಮಗಳು ಸ್ಥಗಿತವಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಳಿಮುಖವಾಗಿದೆ.
ರಾಜ್ಯದಲ್ಲಿ ಮಳೆಗಾಲ ಸಮಯದಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನಗಳಿಗೆ ವಿದ್ಯುತ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೂ, ಆರ್ಟಿಪಿಎಸ್ನ ಒಂದೆರಡು ವಿದ್ಯುತ್ ಘಟಕಗಳಿಂದ, ವಿದ್ಯುತ್ ಉತ್ಪಾದಿಸುವ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿತ್ತು. ಆರ್‌ಟಿಪಿಎಸ್ ಆರಂಭದಿಂದಲೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿರುವ ಉದಾಹರಣೆಯಿಲ್ಲ. ಈಗ ಸಂಪೂರ್ಣವಾಗಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಇದರಿಂದ ಆರ್ಟಿಪಿಎಸ್ಗೆ ಆರ್ಥಿಕ ಹೊರೆಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಸುಮಾರು 600 ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿಸಿದೆ.
ಆರ್‌ಟಿಪಿಎಸ್ ಬೇಡಿಕೆ ಕುಸಿತ: ಕೊರೊನಾ ಸೋಂಕಿನ ಪರಿಣಾಮದಿಂದ ಹಲವು ಕೈಗಾರಿಕೆಗಳು ಸ್ಥಗಿತವಾಗಿವೆ. ಪವನ ಶಕ್ತಿ, ಜಲ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಇದರಿಂದ ಆರ್ಟಿಪಿಎಸ್ನ ವಿದ್ಯುತ್ಗೆ ಬೇಡಿಕೆಯಿಲ್ಲ. ಹೀಗಾಗಿ ಕೇಂದ್ರದಲ್ಲಿ 8 ಘಟಕಗಳನ್ನು ಬಂದ್ ಮಾಡಲಾಗಿದೆ ಎಂದು ಪ್ರಭಾರಿ ಇಡಿ ಕೆ.ವಿ. ವೆಂಕಟಾಚಲಪತಿ ಹೇಳಿದರು.