ರಾಯಚೂರು: ಬೈಕ್ ಸವಾರನನ್ನು ಬಚಾವ್ ಮಾಡಲು ಹೋಗಿ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿನ ಗುಡ್ಡದ ಕಲ್ಲಿನ ಮೇಲೆ ನಿಂತಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅಪಾಯವೊಂದು ತಪ್ಪಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಹೊರವಲಯದ ಬಳಿ ಬರುವ ಡೌನ್‌ನಲ್ಲಿ ನಿನ್ನೆ(ಮಂಗಳವಾರ) ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಲಿಂಗಸೂಗೂರು ಸಾರಿಗೆ ಬಸ್ ಡಿಪೋಗೆ ಸೇರಿದ ಕೆಎ- 36, ಎಫ್ 1425 ಬಸ್ ಬಳ್ಳಾರಿ, ಲಿಂಗಸೂಗೂರು, ಕಲಬುರಗಿಗೆ ಸಂಚರಿಸುತ್ತದೆ. ನಿನ್ನೆ (ಮಂಗಳವಾರ) ಸಂಜೆ 7 ಗಂಟೆಯ ಸುಮಾರಿಗೆ ಲಿಂಗಸೂಗೂರು ಕಡೆಯಿಂದ ಕಲಬುರಗಿ ಕಡೆ ಹೊರಟಿತ್ತು.
ಮಾರ್ಗ ಮಧ್ಯ ಗೋಲಪಲ್ಲಿ ಬಳಿ ಬರುವ ಡೌನ್‌ನಲ್ಲಿ ಬೈಕ್ ಅಡ್ಡ ಬಂದಿದೆ. ಆಗ ಬಸ್ ಚಾಲಕ ಬೈಕ್ ಸವಾರನನ್ನು ರಕ್ಷಿಸಲು ಮುಂದಾಗಿ ಬಸ್‌ನ್ನು ರಸ್ತೆಯ ಪಕ್ಕದ ಗುಡ್ಡದ ಕಲ್ಲಿನ ಮೇಲೆ ಹತ್ತಿಸಿದ್ದಾನೆ. ಬಸ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಕಲ್ಲು ಬಂಡೆ ಏರಿದ ಬಸ್‌ನ್ನು ಟ್ರ್ಯಾಕ್ಟರ್ ಹಾಗೂ ಸ್ಥಳೀಯರ ನೇರವಿನಿಂದ ರಸ್ತೆಯ ಮೇಲೆ ಇಳಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.