ರಾಯಚೂರು : ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಆಗಮಿಸದ ಹಿನ್ನೆಲೆ ರೋಗಿಯೊಬ್ಬರು ನಗರದ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆ ಮುಂದೆ ಕೆಲ ಹೊತ್ತು ಫುಟ್ಪಾತ್ ಮೇಲೆಯೇ ಮಲಗಿರುವ ದೃಶ್ಯ ಕಂಡು ಬಂದಿತು.
ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ನಾಗರಾಜ ಎಂಬ ರೋಗಿಯು ಕಳೆದ ಮೂರು ದಿನಗಳ ಹಿಂದೆ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಆದರೆ, ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸುವಂತೆ ಇಲ್ಲಿನ ಆಸ್ಪತ್ರೆ ಸಿಬ್ಬಂದಿ ಸೂಚನೆ ನೀಡಿದ್ದರು. ಅದರಂತೆ ಇಂದು ಬೇರೆ ಆಸ್ಪತ್ರೆಗೆ ತೆರಳುತ್ತಿರುವಾಗ ಸಕಾಲಕ್ಕೆ ಆ್ಯಂಬುಲೆನ್ಸ್ ಬಾರದಿರುವುದಕ್ಕೆ ಕೆಲ ಹೊತ್ತು ರೋಗಿಯನ್ನು ಫುಟ್ಪಾತ್ ಮೇಲೆಯೇ ಮಲಗಿಸಲಾಗಿತ್ತು.
ಮಾಧ್ಯಮದಲ್ಲಿ ರೋಗಿಯೊಬ್ಬ ಫುಟ್‍ಪಾತ್ ಮೇಲೆ ಮಲಗಿದ್ದರ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಆಸ್ಪತ್ರೆ ಸಿಬ್ಬಂದಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಿಕೊಟ್ಟರು. ಫುಟ್‌ಪಾತ್ ಮೇಲೆ ಮಲಗಿರುವ ದೃಶ್ಯ ನೋಡಿದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವೈದ್ಯರು ಹೇಳಿದಂತೆ ನಾವು ಇಂದು ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೆವು. ಆ್ಯಂಬುಲೆನ್ಸ್ ಬರುವುದು ಸ್ವಲ್ಪ ತಡವಾಯಿತು. ಹಾಗಾಗಿ, ಇಲ್ಲಿ ನಾವೇ ಅವರನ್ನು ಮಲಗಿಸಿದ್ದೆವು. ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿಯ ತಪ್ಪು ಏನೂ ಇಲ್ಲ ಎನ್ನುತ್ತಾರೆ ರೋಗಿಯ ಸಂಬಂಧಿಕರು.
ಇದನ್ನೂ ಓದಿ: ಹೆಣ್ಣು ಹುಟ್ಟಿದ್ದಕ್ಕೆ ಕೋಪ : ಪತ್ನಿ ಕೊಲೆಗೈದ ಪಾಪಿ ಗಂಡ