ರಾಯಚೂರು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬರ ಆವರಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆ ಕೈ ಕೊಟ್ಟಿದ್ದು, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಹೀಗಾಗಿ ಕುಟುಂಬಗಳು ಅನ್ಯ ದಾರಿ ಕಾಣದೆ ತುತ್ತು ಅನ್ನಕ್ಕಾಗಿ ಮಹಾನಗರಗಳತ್ತ ಗುಳೆ ಹೊರಟಿವೆ.
ಒಂದು ಕಡೆ ಮಳೆಯಿಲ್ಲ. ಬೆವರು ಹರಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಬೆಳೆ ಕೈ ಸೇರಲಿಲ್ಲ. ಹೊಟ್ಟೆ ತುಂಬಿಸಬೇಕಲ್ಲ. ಮಳೆ ಇಲ್ಲ, ಬೆಳೆ ಬಂದಿಲ್ಲ ಅಂತ ತಲೆ ಮೇಲೆ ಕೈ ಇಟ್ಟು ಕುಳಿತರೆ ಹಸಿವು ನೀಗೋದಾದ್ರೂ ಹೇಗೆ? ಹೀಗಾಗಿ ಇಲ್ಲಿ ಇಷ್ಟೊಂದು ಕುಟುಂಬಗಳು ಸಾಮಾನು, ಸರಂಜಾಮು ಸಮೇತ ತುತ್ತು ಅನ್ನ ಹುಡುಕಿ ದೂರದೂರಿಗೆ ಹೊರಟು ನಿಂತಿವೆ.
ಅಂದಹಾಗೆ, ಇವರೆಲ್ಲಾ ಮಹಾನಗರಗಳತ್ತ ಬದುಕು ಅರಸಿ ಹೊರಟ ರಾಯಚೂರಿನ ಗ್ರಾಮೀಣ ಭಾಗದ ಬಡ ರೈತ ಕುಟುಂಬಗಳು. ಹಳ್ಳಿಗಳಿಂದ ಮಹಾನಗರಗಳಿಗೆ ತಮ್ಮ ಸರಕು, ಸರಂಜಾಮು, ದವಸ ಧಾನ್ಯಗಳಿರುವ ಗಂಟುಮೂಟೆಗಳ ಜೊತೆ ಬಸ್ಗಾಗಿ ಕಾಯುತ್ತಿದ್ದಾರೆ. ಮಾನ್ವಿ ಬಸ್ ನಿಲ್ದಾಣದಲ್ಲಿ ಕಂಡುಬಂದ ಈ ದೃಶ್ಯ ನಿಜಕ್ಕೂ ಮನ ಕುಲಕುವಂತಿದೆ.
ಸರ್ಕಾರ ಮಾತ್ರ ಇವರಿಗೆ ಉದ್ಯೋಗ ನೀಡಿ ಗುಳೆ ತಪ್ಪಿಸುವ ಕೆಲಸ ಮಾಡುತ್ತಿಲ್ಲ. ಜಿಲ್ಲಾಡಳಿತವೂ ಅಷ್ಟೇ, ಬರದಿಂದ ಬಸವಳಿದ ಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲಾಡಳಿತ ಕೇವಲ ಕಡತಗಳಲ್ಲಿ ಮಾತ್ರ ರಾಜ್ಯದಲ್ಲಿ ಅತೀ ಹೆಚ್ಚು ಮಾನವ ಕೆಲಸ ನೀಡಿರುವ ಜಿಲ್ಲೆ ನಮ್ಮದು ಎನ್ನುತ್ತದೆ. ಆದರೆ, ನರೇಗಾದಲ್ಲಿ ಸರಿಯಾಗಿ ಕೆಲಸ ನೀಡುತ್ತಿಲ್ಲ. ಕೆಲಸ ನೀಡಿದರೂ ಸೂಕ್ತ ಸಮಯಕ್ಕೆ ಕೂಲಿ ನೀಡುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಗುಳೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಗಂಭೀರ ಸಮಸ್ಯೆಯಾಗಿದ್ದು, ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ.