ರಾಯಚೂರು: ನಗರದ ಗೋಶಾಲ ರಸ್ತೆಯಲ್ಲಿನ ನಗರಸಭೆ ವ್ಯಾಪ್ತಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ಮಳಿಗೆಗಳು ಸ್ಥಾಪನೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಕಟ್ಟಡಗಳನ್ನು ನೆಲಸಮ ಮಾಡಲಾಯಿತು.
ಗೋಶಾಲ ರಸ್ತೆಗೆ ಹೊಂದಿಕೊಂಡಂತೆ ಬಿ.ಜಿ ರೋಡ್ ಲೈನ್ಸ್ (ವಡ್ಡೆಪ್ಪ ಜಿನ್) ರಸ್ತೆ ಅಗಲೀಕರಣಗೊಳಿಸಲು ಮುಂದಾಗಿರುವ ನಗರಸಭೆ ಈ ಹಿನ್ನೆಲೆಯಲ್ಲಿ ಇಲ್ಲಿನ ಹಲವು ಗ್ಯಾರೇಜ್, ಹೋಟೆಲ್, ಪಂಕ್ಚರ್ ಶಾಪ್ಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. ನಗರಸಭೆ ವ್ಯಾಪ್ತಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮಳೆಗೆಗಳ ನಿರ್ಮಾಣ ಮಾಡಿದ್ದರಿಂದ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ತೆರವುಗೊಳಿಸಿರುವ ನಿರ್ಧಾರ ಸ್ವಾಗತಾರ್ಹ. ಆದ್ರೆ ಪೂರ್ವಭಾವಿಯಾಗಿ ಮಾಹಿತಿ ನೀಡಬೇಕಿತ್ತು. ಏಕಾಏಕಿ ಜೆಸಿಬಿಯಿಂದ ಕಟ್ಟಡಗಳು, ಟೀನ್ ಶೆಡ್ ತೆರವುಗೊಳಿಸಿದ ಕಾರಣ ಕೆಲವು ವಸ್ತುಗಳು ಜಖಂ ಆಗಿವೆ. ಹಾಗೂ ಪೂರ್ವಭಾವಿಯಾಗಿ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಏಕಾಏಕಿ ನೆಲಸಮ ಮಾಡಿದ ಕಾರಣ ಎಲ್ಲಿಗೆ ಹೋಗಬೇಕು? ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಮಳಿಗೆದಾರರು ಅಳಲು ತೋಡಿಕೊಂಡಿದ್ದಾರೆ.