ರಾಯಚೂರು: ನಗರದಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸುವಂತಾಗಿದೆ.
ಕಳೆದ ರಾತ್ರಿ ಸುರಿದ ಮಳೆಯಿಂದ ನಗರದ ತಗ್ಗು ಪ್ರದೇಶಗಳಾದ ಸಿಯಾತಲಾಬ್, ಬಸವನಬಾವಿ ವೃತ್ತ, ಜಹಿರಾಬಾದ್ ಬಡಾವಣೆ ಸೇರಿದಂತೆ ತಗ್ಗು ಪ್ರದೇಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿದ್ದು, ಮನೆಯಲ್ಲಿ ಬಂದಿರುವ ನೀರಿನ ಮಧ್ಯೆ ರಾತ್ರಿಯಿಡೀ ಕಳೆಯುವಂತಾಯಿತು.
ನಗರದಲ್ಲಿರುವ ಜೆಸ್ಕಾಂ ವಿದ್ಯುತ್ ಉಗ್ರಾಣಕ್ಕೆ ಮಳೆ ನೀರು ಬಂದ ಪರಿಣಾಮ ನೂರಾರು ವಿದ್ಯುತ್ ಟ್ರಾನ್ಸ್ಫಾಮರ್ಗಳು, ವಿದ್ಯುತ್ ಪರಿಕರಗಳು ಸಂಪೂರ್ಣವಾಗಿ ಮುಳುಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಹಲವು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾಲವೆ ಕಾಮಗಾರಿಯಿಂದ ಈ ಘಟನೆಗಳು ಸಂಭವಿಸುತ್ತಿದ್ದು, ನಗರಸಭೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಇದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ನಾರಾಯಣಪುರ ಬಲದಂಡೆ ಕಾಲುವೆಗೆ ಹಾನಿ:
(ಎನ್‌ಆರ್‌ಬಿಸಿ) ಕಾಲುವೆ ಹೊಡೆದಿರುವ ಘಟನೆ ರಾಯಚೂರು ತಾಲೂಕಿನ ಯರಗುಂಟದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಾಲುವೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಕಾಲುವೆ ಒಡೆದು, ನಾಲೆಯ ಸುತ್ತಮುತ್ತಲು ರೈತರ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಬೆಳೆ ಹಾನಿ ಸಂಭವಿಸಿದ ರೈತರು ನಮಗೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.