ರಾಯಚೂರು : ಎರಡು ಪ್ರತ್ಯೇಕ ಆ್ಯಂಬುಲೆನ್ಸ್ ವಾಹನದಲ್ಲಿ ಇಬ್ಬರು ಗರ್ಭಿಣಿಯರಿಗೆ 108 ಆರೋಗ್ಯ ಕವಚ ಸಿಬ್ಬಂದಿ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.
ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮದ ಹನುಮಂತಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿತ್ತು. 108 ವಾಹನದಲ್ಲಿ ಗಣದಿನ್ನಿ ಗ್ರಾಮದಿಂದ ಗರ್ಭಿಣಿಯನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗ ಮಧ್ಯೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿದೆ.
ಆಗ ಶೂಶ್ರುಷಕಿ ಲಕ್ಷ್ಮಿ ಎಂಬುವರು, ಕುಟುಂಬಸ್ಥರ ಸಹಾಯದಿಂದ ಸುಲಭವಾಗಿ ಆ್ಯಂಬುಲೆನ್ಸ್ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ ಹನುಮಂತಿ ಜನ್ಮ ನೀಡಿದ್ದಾರೆ. ಹೆರಿಗೆ ಮಾಡಿಸಿದ ಬಳಿಕ ಆರೋಗ್ಯ ಕವಚ ಸಿಬ್ಬಂದಿ, ತಾಯಿ-ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಅತ್ತ ದೇವದುರ್ಗ ತಾಲೂಕಿನ ಬೆಂಚಿಮರಡಿ ತಾಂಡದ ಅಂಬಾರಿ ಭಾಯಿ ಎನ್ನುವ ಗರ್ಭಿಣಿಯನ್ನು ಆ್ಯಂಬುಲೆನ್ಸ್ ಮೂಲಕ ದೇವದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ತೀವ್ರ ಹೆರಿಗೆ ನೋವು ಕಾಣಿಸಿತ್ತು. ಆರೋಗ್ಯ ಕವಚ ಸಿಬ್ಬಂದಿ ಆ್ಬಂಬುಲೆನ್ಸ್ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ- ಮಗುವಿನ ಆರೋಗ್ಯ ಸ್ಥಿರವಾಗಿದೆ. ಆರೋಗ್ಯ ಕವಚ ಸಿಬ್ಬಂದಿ ಈ ಇಬ್ಬರು ಗರ್ಭಿಣಿಯರಿಗೆ ಸುಲಭ ಹೆರಿಗೆ ಮಾಡಿಸಿ ಆಸ್ಪತ್ರೆಗೆ ಸೇರಿಸಿದ್ದು, ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.